ADVERTISEMENT

ಸರಕು ಸಾಗಣೆ ಸಾಧನೆ ಸೂಚ್ಯಂಕ: 13 ಸಾಧಕ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ

ಪಿಟಿಐ
Published 16 ಡಿಸೆಂಬರ್ 2023, 15:50 IST
Last Updated 16 ಡಿಸೆಂಬರ್ 2023, 15:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

iStock Photos

ನವದೆಹಲಿ: ಪ್ರಸಕ್ತ ಆರ್ಥಿಕ ಸಾಲಿನಡಿ ದೇಶದ ಸರಕು ಸಾಗಣೆ ವಲಯಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ 13 ಸಾಧಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕವು ಸ್ಥಾನ ಪಡೆದಿದೆ.

ADVERTISEMENT

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ಸರಕು ಸಾಗಣೆ ಸಾಧನೆ ಸೂಚ್ಯಂಕವನ್ನು ಶನಿವಾರ ಬಿಡುಗಡೆ ಮಾಡಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು ಈ ವರದಿ ಸಿದ್ಧಪಡಿಸಿದೆ.  

ಕಳೆದ ಸಾಲಿನಡಿ ಸಾಧಕ ರಾಜ್ಯಗಳ ಪಟ್ಟಿಯಿಂದ ಹೊರಗೆ ಉಳಿದಿದ್ದ ಸಿಕ್ಕಿಂ ಹಾಗೂ ತ್ರಿಪುರ ಈ ಬಾರಿ ಸ್ಥಾನ ಗಿಟ್ಟಿಸಿಕೊಂಡಿವೆ. ಉಳಿದಂತೆ ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್‌, ಅಸ್ಸಾಂ, ಪಂಜಾಬ್‌, ತೆಲಂಗಾಣ, ಹರಿಯಾಣ, ಉತ್ತರ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಚಂಡೀಗಢ ಈ ಪಟ್ಟಿಯಲ್ಲಿವೆ ಎಂದು ವರದಿ ತಿಳಿಸಿದೆ.

ಈ ಸೂಚ್ಯಂಕವು ದೇಶದ ವ್ಯಾಪಾರ ರಫ್ತು ಹಾಗೂ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಅಗತ್ಯವಾದ ಸರಕು ಸಾಗಣೆ ಸೇವೆಯ ಸೂಚಕವಾಗಿದೆ. 

ಕಳೆದ ಸಾಲಿನಡಿ ಸಾಧಕ ರಾಜ್ಯಗಳ ಪಟ್ಟಿಯಲ್ಲಿ 15 ರಾಜ್ಯಗಳಿದ್ದವು. ಆದರೆ, ಈ ವಲಯದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದಿದ್ದರಿಂದ ಈ ಬಾರಿ ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡ ಹೊರಗುಳಿದಿವೆ.

ಸರಕು ಸಾಗಣೆ ವಲಯದಲ್ಲಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪ, ಪುದುಚೇರಿ ಸ್ಥಾನ ಪಡೆದಿವೆ.

ಆಕಾಂಕ್ಷಿ ರಾಜ್ಯಗಳ ಪಟ್ಟಿಯಲ್ಲಿ ಗೋವಾ, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಛತ್ತೀಸಗಢ, ಹಿಮಾಚಲಪ್ರದೇಶ, ಜಾರ್ಖಂಡ್‌, ಮಣಿಪುರ, ಮೇಘಾಲಯ, ಮಿಜೋರಾಂ, ಕೇಂದ್ರಾಡಳಿತ ಪ್ರದೇಶಗಳಾದ ದಮನ್‌ ಮತ್ತು ಡಿಯೂ, ದಾದ್ರಾ ಮತ್ತು ನಗರ್‌ ಹವೇಲಿ, ಜಮ್ಮು ಮತ್ತು ಕಾಶ್ಮೀರ, ಲಡಾಕ್‌ ಸೇರಿವೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.