ADVERTISEMENT

ರಾಜ್ಯಗಳಿಗೆ ತೆರಿಗೆ ಹಂಚಿಕೆ ಪಾಲು ಶೇ 41ರಷ್ಟೇ ಇರಲಿದೆ: ಎನ್‌.ಕೆ. ಸಿಂಗ್‌

ಪಿಟಿಐ
Published 6 ಮಾರ್ಚ್ 2021, 19:45 IST
Last Updated 6 ಮಾರ್ಚ್ 2021, 19:45 IST
ಎನ್‌.ಕೆ. ಸಿಂಗ್
ಎನ್‌.ಕೆ. ಸಿಂಗ್   

ನವದೆಹಲಿ: ‘15ನೇ ಹಣಕಾಸು ಆಯೋಗವು ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆ ವರಮಾನದಲ್ಲಿ ರಾಜ್ಯಗಳ ಪಾಲನ್ನು ಶೇ 41ರಷ್ಟನ್ನೇ ಉಳಿಸಿಕೊಂಡಿದೆ’ ಎಂದು ಅಧ್ಯಕ್ಷ ಎನ್‌.ಕೆ. ಸಿಂಗ್‌ ಅವರು ಶನಿವಾರ ತಿಳಿಸಿದ್ದಾರೆ.

2021–22 ರಿಂದ 2025–26ರ ಅವಧಿಗೆ ಕೇಂದ್ರದ ಒಟ್ಟಾರೆ ತೆರಿಗೆ ಪಾಲಿನಲ್ಲಿ ರಾಜ್ಯಗಳಿಗೆ ಶೇ 41ರಷ್ಟನ್ನು ಹಂಚಿಕೆ ಮಾಡಬೇಕು ಎಂದು 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದೆ. 14ನೇ ಹಣಕಾಸು ಆಯೋಗ ಮಾಡಿದ್ದ ಶಿಫಾರಸು ಇದೇ ಪ್ರಮಾಣದಲ್ಲಿತ್ತು.

ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌ (ಸಿಪಿಆರ್‌) ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಈ ಹಿಂದೆ, ಪ್ರತಿ ಹಣಕಾಸು ಆಯೋಗವು ರಾಜ್ಯಗಳಿಗೆ ತೆರಿಗೆ ಹಂಚಿಕೆಯ ಪಾಲಿನ ಮೊತ್ತದಲ್ಲಿ ಒಂದಷ್ಟು ಏರಿಕೆ ಮಾಡಿದ್ದವು. ಕೋವಿಡ್‌–19 ಸಾಂಕ್ರಾಮಿಕದಿಂದ ರಾಜ್ಯಗಳು ಮತ್ತು ಕೇಂದ್ರದ ವಿತ್ತೀಯ ಸ್ಥಿತಿ ಕುಗ್ಗಿದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು 15ನೇ ಹಣಕಾಸು ಆಯೋಗವು ಎಲ್ಲಾ ಆಯ್ಕೆಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಆಯೋಗದ ಪ್ರಕಾರ, 5 ವರ್ಷಗಳ ಅವಧಿಗೆ ಸರಾಸರಿ ತೆರಿಗೆ ವರಮಾನವು (ಜಿಟಿಆರ್‌) ₹ 135.2 ಲಕ್ಷ ಕೋಟಿಗಳಷ್ಟಾಗುವ ನಿರೀಕ್ಷೆ ಇದೆ. ಇದರಲ್ಲಿ ಹಂಚಿಕೆ ಮಾಡಬಹುದಾದ ಮೊತ್ತ (ಸೆಸ್, ಸರ್ಚಾರ್ಜ್‌ ಮತ್ತು ಸಂಗ್ರಹದ ವೆಚ್ಚವನ್ನು ಕಡಿತಗೊಳಿಸಿದಾಗ) ₹ 103 ಲಕ್ಷ ಕೋಟಿಗಳಷ್ಟಾಗುವ ಅಂದಾಜು ಮಾಡಲಾಗಿದೆ. ಹೀಗಾಗಿ 2021–26ರ ಅವಧಿಗೆ ರಾಜ್ಯಗಳ ಶೇ 41ರಷ್ಟು ಪಾಲು ₹ 42.2 ಲಕ್ಷ ಕೋಟಿಗಳಷ್ಟಾಗಲಿದೆ.

15ನೇ ಹಣಕಾಸು ಆಯೋಗದ ವರದಿಯನ್ನು ಫೆಬ್ರುವರಿ 2ರಂದು ಸಂಸತ್‌ನಲ್ಲಿ ಮಂಡಿಸಲಾಗಿದೆ.

ಸರಾಸರಿ ತೆರಿಗೆ ವರಮಾನದಲ್ಲಿ ಸೆಸ್‌ ಮತ್ತು ಸರ್ಚಾರ್ಜ್‌ ಪ್ರಮಾಣವೇ ಹೆಚ್ಚಾಗುತ್ತಿದೆ. ಹೀಗಾಗಿ ತೆರಿಗೆ ಹಂಚಿಕೆಯ ಪಾಲು ನಿಧಾನವಾಗಿ ಇಳಿಕೆಯಾಗುತ್ತಿದೆ ಎಂದು ರಾಜ್ಯಸಭೆಯ ಸಂಸದ ಸುಶೀಲ್‌ ಕುಮಾರ್‌ ಮೋದಿ ಅವರು ಗಮನ ಸೆಳೆದರು.

2011–12ರಲ್ಲಿ ಜಿಟಿಆರ್‌ನಲ್ಲಿ 10.4ರಷ್ಟಿದ್ದ ಸೆಸ್‌ ಮತ್ತು ಸರ್ಚಾರ್ಜ್‌ ಪಾಲು ಸದ್ಯ ಶೇ 20.2ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.