ADVERTISEMENT

ಮುಂಚೂಣಿ ಕಂಪನಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 18

ಆಡಳಿತ ಮಂಡಳಿಗಳಲ್ಲಿ ನಿಧಾನವಾಗಿ ಹೆಚ್ಚುತ್ತಿರುವ ಮಹಿಳೆಯರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 21:05 IST
Last Updated 22 ನವೆಂಬರ್ 2022, 21:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ರಾಷ್ಟ್ರೀಯ ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ 500 ಮುಂಚೂಣಿ (ನಿಫ್ಟಿ–500) ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಮಹಿಳೆಯರ ಒಟ್ಟು ಪಾಲು ಶೇಕಡ 17.6ರಷ್ಟು ಇದೆ.

ದೇಶದ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ನಿಧಾನವಾಗಿಯಾದರೂ ಹೆಚ್ಚಾಗುತ್ತಿದೆ ಎಂಬುದನ್ನು ಇದು ತೋರಿಸುತ್ತಿದೆ ಎಂದು ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್ ಅಡ್ವೈಸರಿ ಸರ್ವಿಸಸ್‌ ಸಂಸ್ಥೆ ಸಿದ್ಧಪಡಿಸಿರುವ ಅಧ್ಯಯನ ವರದಿ ಹೇಳಿದೆ.

ಜಾಗತಿಕ ಮಟ್ಟದಲ್ಲಿ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ಸರಿಸುಮಾರು ಶೇಕಡ 24ರಷ್ಟು ಇದೆ. ‘ಕಂಪನಿಗಳ ಆಡಳಿತ ಮಂಡಳಿಗೆ ಮಹಿಳೆಯರನ್ನು ನೇಮಕ ಮಾಡುವ ವಿಚಾರದಲ್ಲಿ ಭಾರತವು ಮುಂದಡಿ ಇರಿಸಿದೆ. 2014ರಲ್ಲಿ ಮಹಿಳೆಯರ ಪ್ರಾತಿನಿಧ್ಯವು ಶೇ 6ರಷ್ಟು ಇತ್ತು. 2017ರ ಸುಮಾರಿಗೆ ಅದು ಶೇ 14ಕ್ಕೆ ಏರಿಕೆ ಆಯಿತು. ಈಗ ಅದು ಶೇ 17.6ಕ್ಕೆ ತಲುಪಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

ಮಾರ್ಚ್‌ ಅಂತ್ಯದವರೆಗಿನ ಮಾಹಿತಿ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಈಗಿನ ವೇಗದಲ್ಲಿ ಸಾಗಿದರೆ ಆಡಳಿತ ಮಂಡಳಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ 30ರಷ್ಟು ಆಗಲು 2058ರವರೆಗೆ ಕಾಯಬೇಕಾಗುತ್ತದೆ.

ಯುರೋಪಿನ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಮಹಿಳೆಯ ಪ್ರಾತಿನಿಧ್ಯ ಶೇ 34.4ರಷ್ಟು ಇದೆ. ಉತ್ತರ ಅಮೆರಿಕದಲ್ಲಿ ಇದು ಶೇ 28.6ರಷ್ಟು ಆಗಿದೆ. ಫ್ರಾನ್ಸ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ 44.5ರಷ್ಟು ಇದೆ.

ನಿಫ್ಟಿ–500 ಕಂಪನಿಗಳ ಪೈಕಿ 22 ಕಂಪನಿಗಳಲ್ಲಿ ಮಹಿಳೆಯರು ಅಧ್ಯಕ್ಷ ಸ್ಥಾನದಲ್ಲಿದ್ದಾರೆ, 25 ಕಂಪನಿಗಳಲ್ಲಿ ಸಿಇಒ ಆಗಿದ್ದಾರೆ, 62 ಕಂಪನಿಗಳಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಲ್ಲಿದ್ದಾರೆ.

ಸರ್ಕಾರಿ ಸ್ವಾಮ್ಯದ ಕಂಪನಿಗಳು ಮಹಿಳೆಯರ ಪ್ರಾತಿನಿಧ್ಯದ ವಿಚಾರದಲ್ಲಿ ಕಳಪೆ ಸಾಧನೆ ತೋರಿವೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಮಗಳ ಪ್ರಕಾರ, ಮಾರುಕಟ್ಟೆ ಬಂಡವಾಳದ ಲೆಕ್ಕಾಚಾರದಲ್ಲಿ ದೇಶದ ಮುಂಚೂಣಿ 1,000 ಕಂಪನಿಗಳ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರ ಸ್ಥಾನಕ್ಕೆ ಕನಿಷ್ಠ ಒಬ್ಬ ಮಹಿಳೆಯನ್ನು ನೇಮಕ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.