ADVERTISEMENT

ಆತ್ಮನಿರ್ಭರ ಭಾರತ: ಬಿಎಚ್‌ಇಎಲ್‍ ಸಾಮರ್ಥ್ಯ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 21:57 IST
Last Updated 18 ಜುಲೈ 2020, 21:57 IST

ಬೆಂಗಳೂರು:‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಬೃಹತ್ ಕೈಗಾರಿಕೆಗಳ ಇಲಾಖೆಯು ‘ಆತ್ಮನಿರ್ಭರ ಭಾರತ-ಉತ್ಪಾದನೆಯಲ್ಲಿನ ಸಹಯೋಗ’ ಕುರಿತ ಆನ್‍ಲೈನ್ ಕಮ್ಮಟವೊಂದನ್ನು ಆಯೋಜಿಸಿತ್ತು.

ಕಮ್ಮಟದಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‍ಇಎಲ್) ತನ್ನ ಸಂಶೋಧನೆ ಮತ್ತು ಅಭಿವೃದ್ಧಿ, ಎಂಜಿನಿಯರಿಂಗ್‌, ಉತ್ಪಾದನೆ ಮತ್ತು ಪರೀಕ್ಷಾ ಸೌಲಭ್ಯಗಳ ಸಾಮರ್ಥ್ಯವನ್ನು ಪ್ರಸ್ತುತಪಡಿಸಿತು. ಸ್ವಾವಲಂಬನೆ ಸಾಧಿಸಲು ಸಹಯೋಗ ನೀಡುವಂತೆ ಬಿಎಚ್‍ಇಎಲ್‍ನ ಅಧ್ಯಕ್ಷ ಡಾ. ನಳಿನ್ ಸಿಂಘಲ್ ಅವರು ಎಲ್ಲಾ ಸಂಸ್ಥೆಗಳಿಗೂ ಆಹ್ವಾನ ನೀಡಿದರು.

ಬೃಹತ್ ಕೈಗಾರಿಕೆಗಳ ಕಾರ್ಯದರ್ಶಿ ಅರುಣ್ ಗೋಯಲ್‌ ಅವರು ಅಧ್ಯಕ್ಷತೆ ವಹಿಸಿದ್ದ ಕಮ್ಮಟದಲ್ಲಿ 120ಕ್ಕೂ ಅಧಿಕ ಬೃಹತ್ ಕೈಗಾರಿಕೆಗಳ ಇಲಾಖೆಯ ಹಿರಿಯ ಅಧಿಕಾರಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು, ಭಾರತೀಯ ಖಾಸಗಿ ರಂಗ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು ಮಾತ್ರವಲ್ಲದೆ ಕಾರ್ಮಿಕ ಸಂಘಗಳ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದರು.

ADVERTISEMENT

‘ಸಾರ್ವಜನಿಕ ವಲಯದ ಸಂಸ್ಥೆಗಳು ಹೊಂದಿರುವ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ, ಮೂಲ ಮಾದರಿಯ ಸೃಷ್ಟಿ, ಉತ್ಪಾದನೆ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಎಲ್ಲ ಆಸಕ್ತರಿಗೂ ಲಭ್ಯವಾಗಿಸಿ, ಆ ಮೂಲಕ ಸಾರ್ವಜನಿಕ ಮತ್ತು ಖಾಸಗಿ ರಂಗದ ನಡುವೆ ನಿರಂತರ ಸಹಕಾರ ವರ್ಧನೆ ಆಗಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನ ವೇದಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ಗೋಯಲ್‌ ‌ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.