ನವದೆಹಲಿ: ಕೋವಿಡ್–19 ಹರಡುವುದನ್ನು ನಿಯಂತ್ರಿಸಲು ಲಾಕ್‌ಡೌನ್ ಜಾರಿಗೊಳಿಸಿದ ಬಳಿಕ, ಒಟ್ಟಾರೆ 1.89 ಕೋಟಿ ವೇತನದಾರರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಜುಲೈನಲ್ಲಿಯೇ 50 ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ’ (ಸಿಎಂಐಇ) ಮಾಹಿತಿ ನೀಡಿದೆ.
‘ಏಪ್ರಿಲ್‌ನಲ್ಲಿ 1.77 ಕೋಟಿ ಉದ್ಯೋಗ ನಷ್ಟವಾಗಿತ್ತು. ಜುಲೈನಲ್ಲಿ ಈ ಸಂಖ್ಯೆ 1.89 ಕೋಟಿಗೆ ತಲುಪಿತು. ವೇತನ ಆಧಾರಿತ ಉದ್ಯೋಗಗಳ ನಷ್ಟ ಸುಲಭಕ್ಕೆ ಆಗುವುದಿಲ್ಲ. ಒಮ್ಮೆ ನಷ್ಟವಾದರೆ ಅದನ್ನು ಮರಳಿ ಪಡೆಯುವುದು ತೀರಾ ಕಷ್ಟ. ಈ ರೀತಿ ಉದ್ಯೋಗ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಬೆಳವಣಿಗೆ’ ಎಂದು ಸಿಎಂಐಇ ಎಚ್ಚರಿಸಿದೆ.
ಈ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರವು ನಿರುದ್ಯೋಗ ಭತ್ಯೆ ಪಡೆಯಲು ಇರುವ ಅರ್ಹತಾ ಮಾನದಂಡಗಳನ್ನು ತುಸು ಸಡಿಲಿಸುವ ಸಾಧ್ಯತೆ ಇದೆ.
ತಯಾರಿಕಾ ವಲಯದಲ್ಲಿ ಅತಿ ಹೆಚ್ಚಿನ ಉದ್ಯೋಗ ನಷ್ಟವಾಗಿದೆ ಎಂದು ಸಿಎಂಐಇ ವರದಿ ತಿಳಿಸಿದೆ. ಜವಳಿ ವಲಯದಲ್ಲಿ ಹೆಚ್ಚಿನ ಉದ್ಯೋಗ ನಷ್ಟವಾಗಿದ್ದು, ಕಂಪನಿಗಳು ವೇತನಕ್ಕಾಗಿ ಪಾವತಿ ಮಾಡುತ್ತಿದ್ದ ಮೊತ್ತದಲ್ಲಿ ಇಳಿಕೆ ಆಗಿದೆ. ಜವಳಿ ವಲಯವು ವೇತನಕ್ಕಾಗಿ ಖರ್ಚು ಮಾಡುವ ಮೊತ್ತದಲ್ಲಿ ಶೇಕಡ 29ರಷ್ಟು ಕಡಿಮೆಯಾಗಿದೆ. ಚರ್ಮೋದ್ಯಮದಲ್ಲಿ ಜೂನ್ ತ್ರೈಮಾಸಿಕದಲ್ಲಿ ವೇತನಕ್ಕಾಗಿನ ಖರ್ಚಿನಲ್ಲಿ ಶೇ 22ರಷ್ಟು ಇಳಿಕೆಯಾಗಿದೆ. ವಾಹನ ಬಿಡಿಭಾಗಗಳ ಉದ್ಯಮದಲ್ಲಿಯೂ ವೇತನದ ಮೇಲಿನ ವೆಚ್ಚ ಶೇ 21ರಷ್ಟು ಕಡಿಮೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.