ಬೆಂಗಳೂರಿನಲ್ಲಿ ಮಂಗಳವಾರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು, ನಬಾರ್ಡ್‌ನಿಂದ ಸಿದ್ಧಪಡಿಸಿರುವ ಸಾಲದ ಆದ್ಯತಾ ಪತ್ರವನ್ನು ಬಿಡುಗಡೆಗೊಳಿಸಿದರು. ಭವೇಂದ್ರ ಕುಮಾರ್, ಕೆವಿಎಸ್‌ಎಸ್‌ಎಲ್‌ವಿ ಪ್ರಸಾದ ರಾವ್, ಸೋನಾಲಿ ಸೇನ್ ಗುಪ್ತಾ, ಜೂಹಿ ಸ್ಮಿತಾ ಸಿನ್ಹಾ ಇದ್ದರು –ಪ್ರಜಾವಾಣಿ ಚಿತ್ರ
ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಿಂದ (ನಬಾರ್ಡ್) ಕರ್ನಾಟಕದ ಆದ್ಯತಾ ವಲಯಕ್ಕೆ 2025–26ನೇ ಆರ್ಥಿಕ ವರ್ಷದಲ್ಲಿ ₹4.47 ಲಕ್ಷ ಕೋಟಿ ಸಾಲ ವಿತರಿಸುವ ಗುರಿ ನಿಗದಿಪಡಿಸಲಾಗಿದೆ.
2024–25ನೇ ಸಾಲಿನಡಿ ₹3.97 ಲಕ್ಷ ಕೋಟಿ ಸಾಲ ನಿಗದಿಪಡಿಸಲಾಗಿದೆ. ಇದಕ್ಕೆ ಹೋಲಿಸಿದರೆ ಶೇ 12.55ರಷ್ಟು ಹೆಚ್ಚಿದೆ. ವಿವಿಧ ಬ್ಯಾಂಕ್‌ಗಳ ಮೂಲಕ ಈ ಸಾಲ ವಿತರಣೆಗೆ ಗುರಿ ಹೊಂದಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿ ಆದ್ಯತಾ ವಲಯಗಳಿಗೆ ಅಗತ್ಯವಿರುವ ಆರ್ಥಿಕ ನೆರವಿನ ಕುರಿತು ನಬಾರ್ಡ್ ಸಿದ್ಧಪಡಿಸಿರುವ ಈ ಆದ್ಯತಾ ಪತ್ರವನ್ನು (ಸ್ಟೇಟ್ ಫೋಕಸ್ ಪೇಪರ್) ಮಂಗಳವಾರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಅವರು, ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ರೈತರು, ಮಹಿಳೆಯರು, ಎಂಎಸ್‌ಎಂಇ ವಲಯದ ಸಬಲೀಕರಣಕ್ಕೆ ಬ್ಯಾಂಕ್‌ಗಳು ಮತ್ತಷ್ಟು ಆರ್ಥಿಕ ನೆರವು ಒದಗಿಸಲು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ಜಲಾನಯನ, ಕೃಷಿ ಮೂಲಸೌಕರ್ಯ, ಎಂಎಸ್‌ಎಂಇ ವಲಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಬಾರ್ಡ್ ಕಾರ್ಯ ಶ್ಲಾಘನೀಯವಾದುದು ಎಂದರು.
ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಕೆ.ವಿ.ಎಸ್.ಎಸ್.ಎಲ್.ವಿ. ಪ್ರಸಾದ ರಾವ್ ಮಾತನಾಡಿ, ‘2025-26ನೇ ಆರ್ಥಿಕ ವರ್ಷಕ್ಕೆ ನಿಗದಿಪಡಿಸಿರುವ ಸಾಲದಲ್ಲಿ ಕೃಷಿಗೆ ₹2.04 ಲಕ್ಷ ಕೋಟಿ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ (ಎಂಎಸ್ಎಂಇ) ₹1.88 ಲಕ್ಷ ಕೋಟಿ ಮತ್ತು ಇತರೆ ಆದ್ಯತೆಯ ವಲಯದ ಚಟುವಟಿಕೆಗಳಿಗೆ ₹56 ಸಾವಿರ ಕೋಟಿ ಎಂದು ನಿಗದಿಪಡಿಸಲಾಗಿದೆ’ ಎಂದು ವಿವರಿಸಿದರು.
ಪ್ರಸಕ್ತ ಸಾಲಿನಡಿ ರಾಜ್ಯಕ್ಕೆ ₹2,056 ಕೋಟಿ ಮೊತ್ತದ ಆರ್‌ಐಡಿಎಫ್ ನೆರವು ಒಳಗೊಂಡಂತೆ 298 ಗ್ರಾಮೀಣ ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಎಸ್‌ಬಿಐ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ ಮಾತನಾಡಿ, ‘ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನಬಾರ್ಡ್ ಪ್ರಮುಖ ಪಾತ್ರ ವಹಿಸುತ್ತಿದೆ. ಕೃಷಿ ವಲಯದ ಅಭಿವೃದ್ಧಿಗೆ ಬ್ಯಾಂಕ್‌ಗಳು ವಿವಿಧ ಸಾಲ ಸೌಲಭ್ಯ ಕಲ್ಪಿಸುತ್ತಿವೆ’ ಎಂದು ಹೇಳಿದರು.
ಇದೇ ವೇಳೆ ನಬಾರ್ಡ್‌ನಿಂದ ಕೃಷಿ ಕುರಿತು ತಯಾರಿಸಿರುವ ‘ಜೀವ’ ಕಿರುಚಿತ್ರವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆರ್‌ಬಿಐನ ಪ್ರಾದೇಶಿಕ ಕಚೇರಿತ ನಿರ್ದೇಶಕಿ ಸೋನಾಲಿ ಸೇನ್ ಗುಪ್ತಾ, ಕೆನರಾ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.