ADVERTISEMENT

ಕೊಬ್ಬರಿ ಖರೀದಿ: 2 ದಿನದಲ್ಲಿ 30,543 ರೈತರು ನೋಂದಣಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 21:29 IST
Last Updated 5 ಮಾರ್ಚ್ 2024, 21:29 IST
ಕುಣಿಗಲ್ ಎಪಿಎಂಸಿ ಆವರಣದಲ್ಲಿ ಕೊಬ್ಬರಿ ಖರೀದಿ ಕೇಂದ್ರದ ಮುಂದೆ ನೊಂದಣಿಗಾಗಿ ಸರತಿ ಸಾಲಿನಲ್ಲಿ ನಿಂತಿರುವ ರೈತರು
ಕುಣಿಗಲ್ ಎಪಿಎಂಸಿ ಆವರಣದಲ್ಲಿ ಕೊಬ್ಬರಿ ಖರೀದಿ ಕೇಂದ್ರದ ಮುಂದೆ ನೊಂದಣಿಗಾಗಿ ಸರತಿ ಸಾಲಿನಲ್ಲಿ ನಿಂತಿರುವ ರೈತರು   

ಬೆಂಗಳೂರು: ಕೊಬ್ಬರಿ ಖರೀದಿ ನೋಂದಣಿಗೆ ಎರಡು ದಿನಗಳಿಂದ 30,543 ರೈತರು, ಒಟ್ಟು 3,72,307 ಕ್ವಿಂಟಲ್ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ.

ಸೋಮವಾರದಂದು ಎಂಟು ಜಿಲ್ಲೆಗಳಿಂದ 8,740 ರೈತರು, ಒಟ್ಟು 1,07,592 ಕ್ವಿಂಟಲ್‌ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದರು. ಖರೀದಿ ಕೇಂದ್ರಗಳಲ್ಲಿ ಸರ್ವರ್ ಹಾಗೂ ಇಂಟರ್‌ನೆಟ್‌ ಸಮಸ್ಯೆಯಿಂದಾಗಿ ಮೊದಲ ದಿನದಂದು ನೋಂದಣಿ ಮಂದಗತಿಯಲ್ಲಿತ್ತು. ಸರದಿ ಸಾಲಿನಲ್ಲಿ ನಿಂತು ಕಾಯ್ದಿದ್ದ ರೈತರು ನಿರಾಸೆ ಅನುಭವಿಸಿದ್ದರು.

ಎರಡನೇ ದಿನವಾದ ಮಂಗಳವಾರ ನೋಂದಣಿ ಪ್ರಕ್ರಿಯೆ ಚುರುಕು ಪಡೆದಿದ್ದು, ಖರೀದಿ ಕೇಂದ್ರಗಳ ಬಳಿ ರೈತರ ದಟ್ಟಣೆ ಕಂಡುಬಂದಿತು. 21,803 ರೈತರು, ಒಟ್ಟು 2,64,715 ಕ್ವಿಂಟಲ್‌ ಕೊಬ್ಬರಿ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ.

ADVERTISEMENT

ಚಾಮರಾಜನಗರ 5 ಕ್ವಿಂಟಲ್‌, ಚಿಕ್ಕಮಗಳೂರು 35,791, ಚಿತ್ರದುರ್ಗ 27,162, ಹಾಸನ 71,649, ಮಂಡ್ಯ 33,904, ಮೈಸೂರು 886, ರಾಮನಗರ 2,063 ಮತ್ತು ತುಮಕೂರು ಜಿಲ್ಲೆಯಲ್ಲಿ 93,193 ಕ್ವಿಂಟಲ್‌ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. 

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ  ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.

ಪ್ರಸಕ್ತ ಋತುವಿನಡಿ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಒಟ್ಟು 6,92,500 ಕ್ವಿಂಟಲ್‌ (69,250 ಟನ್‌) ಕೊಬ್ಬರಿ ಖರೀದಿಗೆ ನಿರ್ಧರಿಸಿದೆ. ಈ ಖರೀದಿ ಪ್ರಮಾಣಕ್ಕೆ ತಲುಪಿದ ತಕ್ಷಣವೇ ನೋಂದಣಿ ಪ್ರಕ್ರಿಯೆ ಸ್ವಯಂಚಾಲಿತವಾಗಿ ಸ್ಥಗಿತವಾಗುತ್ತದೆ.‌

ಮಹಾಮಂಡಳಗಳ ಪೋರ್ಟಲ್‌ನಲ್ಲಿ ನೋಂದಣಿಯಾದ ಕೊಬ್ಬರಿ ಬೆಳೆಗಾರರ ದತ್ತಾಂಶವು ನಾಫೆಡ್‌ನ ಇ–ಸಮೃದ್ಧಿ ಪೋರ್ಟಲ್‌ಗೆ ರವಾನೆಯಾದ ನಂತರ ಖರೀದಿ ಆರಂಭವಾಗಲಿದೆ ಎಂದು ನಾಫೆಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಟೋಕನ್ ವಿತರಣೆ: ನೋಂದಣಿ ಸರಾಗ: ಹಾಸನ ಜಿಲ್ಲೆಯಾದ್ಯಂತ ಮಂಗಳವಾರ ಕೊಬ್ಬರಿ ಖರೀದಿ ನೋಂದಣಿ ಸರಾಗವಾಗಿ ನಡೆಯಿತು. ಸೋಮವಾರ ಸಂಜೆಯೇ ಟೋಕನ್‌ ವಿತರಿಸಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ.

ಅಂಗವಿಕಲರನ್ನು ನೇರವಾಗಿ ಕರೆತಂದು ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಗಳ ಆವರಣದಲ್ಲಿ ರೈತರಿಗೆ ಊಟ, ಶಾಮಿಯಾನದ ವ್ಯವಸ್ಥೆಯನ್ನೂ ಮಾಡಲಾಗಿದೆ.

‘ರೈತರು ಸರದಿಯಲ್ಲಿ ಬರುತ್ತಿರುವುದರಿಂದ ನೋಂದಣಿಗೂ ಅನುಕೂಲವಾಗಿದ್ದು, ನಿತ್ಯ 200ಕ್ಕೂ ಹೆಚ್ಚು ನೋಂದಣಿ ಮಾಡಲು ಸಾಧ್ಯವಾಗುತ್ತಿದೆ’ ಎಂದು ಸಿಬ್ಬಂದಿ ತಿಳಿಸಿದರು.

ಬೆರಳಚ್ಚು ಸಮಸ್ಯೆ: ನೋಂದಣಿಗೆ ಈ ವರ್ಷ ಬೆರಳಚ್ಚು ಕಡ್ಡಾಯ ಮಾಡಲಾಗಿದ್ದು, ಕೆಲವರಿಗೆ ಬೆರಳಚ್ಚು ದೊರೆಯದೇ ಬರಿಗೈಲಿ ವಾಪಸಾದರು.

‘ಬೆರಳಚ್ಚಿನ ಸಮಸ್ಯೆ ನಿವಾರಣೆಗೆ ಐ ಸ್ಕ್ಯಾನರ್‌ ನೀಡುವುದಾಗಿ ಹೇಳಲಾಗಿತ್ತು. ಆದರೆ, ಅದನ್ನು ಒದಗಿಸಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ’ ಎಂದು ರೈತರು ದೂರಿದರು.

‘ಪ್ರಸಕ್ತ ವರ್ಷ ಕೊಬ್ಬರಿಗೆ ಬೆಲೆ ಇಲ್ಲದೆ ರೈತರು ದಾಸ್ತಾನು ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊಬ್ಬರಿ ಖರೀದಿ ಸಾಮರ್ಥ್ಯ ಅವೈಜ್ಞಾನಿಕ ರೀತಿಯಾಗಿದೆ. ಮೊದಲು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ‌
ನಾರಾಯಣಸ್ವಾಮಿ, ರೈತ ಮುಖಂಡ, ಮಂಡ್ಯ

ಸರ್ವರ್‌ ಸಮಸ್ಯೆಗೆ ಟೋಕನ್‌ ಪರಿಹಾರ

ತುಮಕೂರು: ಜಿಲ್ಲೆಯಲ್ಲಿ ಎರಡನೇ ದಿನದಂದು ನೋಂದಣಿಯು ಬಹುತೇಕ ಸುಸೂತ್ರವಾಗಿ ನಡೆಯಿತು.

ಸರ್ವರ್ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಸರದಿ ನಿಂತ ಎಲ್ಲಾ ರೈತರನ್ನು ಒಮ್ಮೆಲೇ ನೋಂದಣಿ ಮಾಡಿಕೊಳ್ಳುವುದು ಕಷ್ಟ ಎಂದು ಅರಿತು ಟೋಕನ್ ಕೊಡುವ ವ್ಯವಸ್ಥೆ ಜಾರಿಗೆ ತರಲಾಗಿದೆ.

ಟೋಕನ್ ಪಡೆದವರು ಮರುದಿನ ಬಂದು ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ತಿಪಟೂರು ತಾಲ್ಲೂಕಿನಲ್ಲಿ ಮಾತ್ರ ಟೋಕನ್ ನೀಡದೆ ನೇರವಾಗಿ ನೋಂದಣಿ ಮಾಡಲಾಗುತ್ತಿದೆ.

ತುರುವೇಕೆರೆ ಎಪಿಎಂಸಿ ಆವರಣದ ಕಸಬಾ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಜನಸಂದಣಿ, ನೂಕುನುಗ್ಗಲು ಇತ್ತು. ಟೋಕನ್ ಪಡೆಯಲು ಮಹಿಳೆಯರು, ರೈತರು ಮುಗಿಬಿದ್ದರು. 

‘ಸೋಮವಾರ ರಾತ್ರಿಯೆಲ್ಲ ಸೊಳ್ಳೆಗಳ ವಿಪರೀತ ಕಾಟವಿತ್ತು. ಕುಡಿಯಲು ನೀರು ಇರಲಿಲ್ಲ. ಬೆಳಗಾದರೆ ಬಿಸಿಲಿನಲ್ಲಿ ನಿಲ್ಲಲು ಸಾಧ್ಯ ವಾಗುತ್ತಿಲ್ಲ. ದೂರದ ಗ್ರಾಮಗಳಿಂದ ಬಂದಿರುವವರಿಗೆ ಶೌಚಾಲಯ ವ್ಯವಸ್ಥೆ ಮಾಡಬೇಕು’ ಎಂದು ರೈತರು ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಎಂ.ಟಿ.ಕೃಷ್ಣಪ್ಪ ಬಳಿ ಅಳಲು ತೋಡಿಕೊಂಡರು.

ನೋಂದಣಿಗೆ ಜಾಗರಣೆ

ಕಿಕ್ಕೇರಿ (ಮಂಡ್ಯ ಜಿಲ್ಲೆ): ರೈತರು ಸೋಮವಾರ ರಾತ್ರಿ ಪಟ್ಟಣದ ಎಪಿ‌ಎಂಸಿಯಲ್ಲಿ ಜಾಗರಣೆ ಇದ್ದು ಮಂಗಳವಾರ ಸರದಿಗಾಗಿ ಕಾದರು. ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಕೆಲಕಾಲ ಗದ್ದಲ ಉಂಟಾಯಿತು. ಪೊಲೀಸರ ಮಾತಿಗೂ ಕಿವಿಗೊಡಲಿಲ್ಲ. ತಹಶೀಲ್ದಾರ್ ನಿಸರ್ಗಪ್ರಿಯ ಸ್ಥಳಕ್ಕೆ ಬಂದು ರೈತರನ್ನು ಸಮಾಧಾನ ಪಡಿಸಿದರು.

ಸೋಮವಾರ 130 ರೈತರು ನೋಂದಣಿಯಾಗಿದ್ದು, 800 ರೈತರಿಗೆ ಟೋಕನ್ ವಿತರಿಸಲಾಗಿತ್ತು. ಹೀಗಾಗಿ ನೋಂದಣಿ ಮಾಡಿಸಿಯೇ ಮನೆಗೆ ತೆರಳಲು ನಿಶ್ಚಯಿಸಿದ ಬಹುತೇಕರು ಮಾರುಕಟ್ಟೆ ಆವರಣದಲ್ಲಿ ಊಟ ತಿಂಡಿ ಲೆಕ್ಕಿಸದೇ ಇಡೀ ರಾತ್ರಿ ಜಾಗರಣೆ ಮಾಡಿದರು. ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ ಸಿಗದೆ ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.