ಬೆಂಗಳೂರು: ಕಳೆದ ಎರಡೂವರೆ ತಿಂಗಳಿನಲ್ಲಿ 800 ಕೋಟಿ (8 ಬಿಲಿಯನ್) ಅನಪೇಕ್ಷಿತ ಕರೆಗಳು ಮತ್ತು 8 ಕೋಟಿ ಅನಪೇಕ್ಷಿತ ಎಸ್‌ಎಂಎಸ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ದೂರಸಂಪರ್ಕ ಕಂಪನಿ ಭಾರ್ತಿ ಏರ್‌ಟೆಲ್ ತಿಳಿಸಿದೆ.
ಅನಪೇಕ್ಷಿತ ಕರೆ ಮತ್ತು ಸಂದೇಶ ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ ಆಧರಿತ ತಂತ್ರಜ್ಞಾನವನ್ನು ದೇಶದಲ್ಲಿ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯು 25 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ತನ್ನೆಲ್ಲಾ ಗ್ರಾಹಕರಿಗೆ ಅನುಮಾನಾಸ್ಪದ ಕರೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಜೊತೆಗೆ, ಇಂತಹ ಕರೆಗಳನ್ನು ಸ್ವೀಕರಿಸುವ ಪ್ರಮಾಣದಲ್ಲಿ ಶೇ 12ರಷ್ಟು ಇಳಿಕೆಯಾಗಿದೆ ಎಂದು ಹೇಳಿದೆ.
ಒಟ್ಟು ಕರೆಗಳ ಪೈಕಿ ಶೇ 6ರಷ್ಟು ಅನಪೇಕ್ಷಿತ ಕರೆ ಮತ್ತು ಶೇ 2ರಷ್ಟು ಸಂದೇಶಗಳು ಅನಪೇಕ್ಷಿತ ಸಂದೇಶಗಳಾಗಿವೆ. ಸ್ಪ್ಯಾಮರ್‌ಗಳು ಶೇ 35ರಷ್ಟು ಸ್ಥಿರ ದೂರವಾಣಿಗಳನ್ನು ಬಳಸುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.
ಈ ಅವಧಿಯಲ್ಲಿ ದೆಹಲಿಯ ಗ್ರಾಹಕರು ಅತ್ಯಧಿಕ ಅನಪೇಕ್ಷಿತ ಕರೆಗಳನ್ನು ಸ್ವೀಕರಿಸಿದ್ದಾರೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಇವೆ. ಈ ಕರೆಗಳ ಮೂಲವು ಮೊದಲು ದೆಹಲಿ, ನಂತರ ಮುಂಬೈ ಮತ್ತು ಕರ್ನಾಟಕದ್ದಾಗಿದೆ ಎಂದೂ ಸಹ ಗಮನಿಸಲಾಗಿದೆ.
ಸಂದೇಶಗಳ ಪೈಕಿ ಮೊದಲು ಗುಜರಾತ್, ನಂತರ ಕೋಲ್ಕತ್ತ ಮತ್ತು ಉತ್ತರಪ್ರದೇಶದಿಂದ ಹೆಚ್ಚಿನ ಅನಪೇಕ್ಷಿತ ಸಂದೇಶಗಳನ್ನು ಕಳುಹಿಸಲಾಗಿದೆ. ಮುಂಬೈ, ಚೆನ್ನೈ ಹಾಗೂ ಗುಜರಾತ್‌ನಲ್ಲಿನ ಗ್ರಾಹಕರು ಅನಪೇಕ್ಷಿತ ಕರೆಗಳಿಗೆ ಗುರಿಯಾಗಿದ್ದಾರೆ. ಅನಪೇಕ್ಷಿತ ಕರೆಗಳ ಪೈಕಿ ಗುರಿಯಾದವರಲ್ಲಿ ಶೇ 76ರಷ್ಟು ಪುರುಷರಿದ್ದಾರೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.