ADVERTISEMENT

ಅವಧಿಗೆ ಮೊದಲೇ ಸಾಲ ತೀರಿಸಲಿರುವ ಅದಾನಿ ಸಮೂಹ

ಪಿಟಿಐ
Published 6 ಫೆಬ್ರುವರಿ 2023, 14:30 IST
Last Updated 6 ಫೆಬ್ರುವರಿ 2023, 14:30 IST
   

ನವದೆಹಲಿ : ಅಂದಾಜು ₹ 9,210 ಕೋಟಿ (1,114 ಅಮೆರಿಕನ್ ಡಾಲರ್) ಮೊತ್ತದ ಸಾಲವನ್ನು ಪ್ರವರ್ತಕರು ಅವಧಿಗೆ ಮೊದಲೇ ತೀರಿಸಲಿದ್ದಾರೆ ಎಂದು ಅದಾನಿ ಸಮೂಹ ಹೇಳಿದೆ. ಇದರಿಂದಾಗಿ ಸಾಲಕ್ಕೆ ಅಡಮಾನವಾಗಿ ಇರಿಸಿರುವ ಷೇರುಗಳನ್ನು ಬಿಡಿಸಿಕೊಳ್ಳಲು ಆಗುತ್ತದೆ. ಈ ಸಾಲದ ಅವಧಿಯು 2024ರ ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದೆ.

ಅದಾನಿ ಪೋರ್ಟ್ಸ್‌ ಆ್ಯಂಡ್‌ ಸ್ಪೆಷಲ್ ಎಕನಾಮಿಕ್ ಜೋನ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಟ್ರಾನ್ಸ್‌ಮಿಷನ್ ಕಂಪನಿಗಳಿಗೆ ಸೇರಿದ ಷೇರುಗಳನ್ನು ಈ ಸಾಲಕ್ಕೆ ಅಡಮಾನವಾಗಿ ಇರಿಸಲಾಗಿದೆ ಎಂದು ಸಮೂಹದ ಪ್ರಕಟಣೆ ತಿಳಿಸಿದೆ.

‘ಷೇರುಗಳನ್ನು ಅಡಮಾನ ಇರಿಸಿ ಪಡೆದಿರುವ ಸಾಲಗಳನ್ನು ಅವಧಿಗೆ ಮೊದಲೇ ತೀರಿಸುವುದಾಗಿ ಪ್ರವರ್ತಕರು ನೀಡಿರುವ ಭರವಸೆಯ ಮುಂದುವರಿಕೆ ಇದು’ ಎಂದು ಹೇಳಿಕೆ ತಿಳಿಸಿದೆ.

ADVERTISEMENT

ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಅದಾನಿ ಸಮೂಹದ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿದ ನಂತರದಲ್ಲಿ, ಸಮೂಹದ ಕಂಪನಿಗಳ ಷೇರುಮೌಲ್ಯ ಕುಸಿದಿದೆ. ಆರೋಪಗಳನ್ನು ಸಮೂಹವು ಅಲ್ಲಗಳೆದಿದೆ.

ಸಾಲವನ್ನು ಅವಧಿಗೆ ಮೊದಲೇ ತೀರಿಸಿದ ನಂತರದಲ್ಲಿ, ಅದಾನಿ ಪೋರ್ಟ್ಸ್‌ ಆ್ಯಂಡ್‌ ಸ್ಪೆಷಲ್ ಎಕನಾಮಿಕ್ ಜೋನ್‌ ಕಂಪನಿಯ ಶೇ 12ರಷ್ಟು ಷೇರುಗಳು ಮತ್ತೆ ಪ್ರವರ್ತಕರ ಕೈಗೆ ಬರಲಿವೆ. ಅದಾನಿ ಗ್ರೀನ್ ಕಂಪನಿಯ ಶೇ 3 ರಷ್ಟು ಷೇರುಗಳು ಹಾಗೂ ಅದಾನಿ ಟ್ರಾನ್ಸ್‌ಮಿಷನ್‌ನ ಶೇ 1.4ರಷ್ಟು ಷೇರುಗಳು ಪ್ರವರ್ತಕರಿಗೆ ಮರಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.