Very good uptake expected in Agri exports to US after Trade Deal: APEDA Chairman
ನ್ಯೂರೆಂಬರ್ಗ್(ಜರ್ಮನಿ): ಮಧ್ಯಂತರ ವ್ಯಾಪಾರ ಒಪ್ಪಂದದ ನಂತರ ಭಾರತವು ಅಮೆರಿಕಕ್ಕೆ ಕೃಷಿ ಮತ್ತು ಸಾವಯವ ಉತ್ಪನ್ನಗಳ ರಫ್ತಿನಲ್ಲಿ ಗಮನಾರ್ಹ ಏರಿಕೆಯನ್ನು ಕಾಣುವ ನಿರೀಕ್ಷೆಯಿದೆ. ಸ್ಪರ್ಧಾತ್ಮಕ ಶೇ 18ರಷ್ಟು ಸುಂಕ ದರವು ಭಾರತೀಯ ರಫ್ತುದಾರರಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ನಿರ್ಣಾಯಕ ಸ್ಥಾನವನ್ನು ಒದಗಿಸುತ್ತದೆ ಎಂದು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಅಧ್ಯಕ್ಷ ಅಭಿಷೇಕ್ ದೇವ್ ಹೇಳಿದ್ದಾರೆ.
BIOFACH 2026ರ ಸಂದರ್ಭದಲ್ಲಿ ಎಎನ್ಐ ಜೊತೆ ಮಾತನಾಡಿದ ದೇವ್, ಭಾರತೀಯ ಕೃಷಿಗೆ ಒಪ್ಪಂದದ ಪ್ರಯೋಜನಗಳ ಬಗ್ಗೆ ಬಲವಾದ ವಿಶ್ವಾಸ ವ್ಯಕ್ತಪಡಿಸಿದರು.
‘ಇದು ನಮಗೆ ಬಹಳ ಪ್ರಯೋಜನಕಾರಿ ಫಲಿತಾಂಶವಾಗಿದೆ. ಏಕೆಂದರೆ, ಭಾರತ ಒಪ್ಪಿಕೊಂಡಿರುವ ತೆರಿಗೆ ದರಗಳು ಬಹಳ ಸ್ಪರ್ಧಾತ್ಮಕವಾಗಿವೆ. ಶೇ 18 ಸುಂಕವು ಇತರ ದೇಶಗಳಿಗೆ ವಿಧಿಸಲಾಗುತ್ತಿರುವ ಸುಂಕಕ್ಕಿಂತ ಕಡಿಮೆ ಇದೆ. ಹೀಗಾಗಿ, ನಮ್ಮ ಉತ್ಪನ್ನಗಳಿಗೆ ನಾವು ತುಂಬಾ ಸ್ಪರ್ಧಾತ್ಮಕ ಸ್ಥಾನವನ್ನು ಹೊಂದಿರುತ್ತೇವೆ. ಈಗಾಗಲೇ, ನಮ್ಮ ಉತ್ಪನ್ನಗಳು ತುಂಬಾ ಸ್ಪರ್ಧಾತ್ಮಕವಾಗಿವೆ. ಈ ತುಲನಾತ್ಮಕ ಕಡಿಮೆ ಸುಂಕದಿಂದಾಗಿ ನಾವು ಖಂಡಿತವಾಗಿಯೂ ನಮ್ಮ ರಫ್ತುಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ’ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ಸವಾಲುಗಳ ಹೊರತಾಗಿಯೂ ಭಾರತದ ಬಲವಾದ ರಫ್ತು ಕಾರ್ಯಕ್ಷಮತೆಯನ್ನು ಎಪಿಇಡಿಎ ಅಧ್ಯಕ್ಷರು ಒತ್ತಿ ಹೇಳಿದ್ದಾರೆ.
'ಕಳೆದ ವರ್ಷ, ನಾವು ಅಮೆರಿಕಕ್ಕೆ ಕೃಷಿಯ ಸಾವಯವ ಉತ್ಪನ್ನಗಳ ರಫ್ತಿನಲ್ಲಿ ಶೇ 30 ಹೆಚ್ಚಳವನ್ನು ಕಂಡಿದ್ದೇವೆ. ಈ ಬಾರಿ ಸುಂಕ ದರಗಳಲ್ಲಿ ವ್ಯತ್ಯಯಗಳಿಂದ ಕೆಲವು ಸಮಸ್ಯೆಗಳಿದ್ದರೂ, ಇದೆಲ್ಲದರ ಹೊರತಾಗಿಯೂ, ಖರೀದಿದಾರರು ಭಾರತೀಯ ಮೂಲದ ಉತ್ಪನ್ನಗಳ ಮೇಲೆ ನಂಬಿಕೆ ಇರಿಸಿದ್ದಾರೆ. ಅದು ಈಗ ಪ್ರಯೋಜನಕಾರಿಯಾಗಿದೆ. ಆದ್ದರಿಂದ, ಶೀಘ್ರದಲ್ಲೇ, ಭಾರತದಿಂದ ಅಮೆರಿಕಕ್ಕೆ ಕೃಷಿ ರಫ್ತಿನಲ್ಲಿ ನಾವು ಉತ್ತಮ ಏರಿಕೆಯನ್ನು ನೋಡುತ್ತೇವೆ’ ಎಂದು ಅತ್ಯಂತ ವಿಶ್ವಾಸದಿಂದ ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಸಾವಯವ ವ್ಯಾಪಾರ ಮೇಳವಾದ BIOFACH 2026ರಲ್ಲಿ ಭಾರತದ ಭಾಗವಹಿಸುವಿಕೆಯ ಬಗ್ಗೆ ಮಾತನಾಡಿದ ದೇವ್, ವೇದಿಕೆಯ ಕಾರ್ಯತಂತ್ರದ ಮಹತ್ವವನ್ನು ಒತ್ತಿ ಹೇಳಿದರು.
‘BIOFACH ಅತಿದೊಡ್ಡ ಸಾವಯವ ವ್ಯಾಪಾರ ಮೇಳವಾಗಿದ್ದು, ನಾವು ಎಲ್ಲ ಪ್ರಮುಖ ಆಮದು ಮಾಡಿಕೊಳ್ಳುವ ದೇಶಗಳಿಂದ ಖರೀದಿದಾರರನ್ನು ಪಡೆಯುತ್ತೇವೆ. ಇಲ್ಲಿ ಪಾಲುದಾರ ರಾಷ್ಟ್ರವಾಗಿ ನಾವು ಭಾಗವಹಿಸುತ್ತಿದ್ದೇವೆ. ಈ ವರ್ಷ ಭಾರತದಿಂದ ಅತಿದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದೇವೆ. ಯುರೋಪಿಯನ್ ಅಲ್ಲದ ರಾಷ್ಟ್ರಗಳಲ್ಲಿ ನಮ್ಮ ದೆಶದಿಂದ ಅತಿಹೆಚ್ಚು ಪ್ರದರ್ಶಕರಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ದೊಡ್ಡ ಕಂಪನಿಗಳು, ರೈತ ಉತ್ಪಾದಕ ಸಂಸ್ಥೆಗಳು(ಪಿಎಫ್‌ಒಗಳು) ಮತ್ತು ವೈಯಕ್ತಿಕ ನಿರ್ವಾಹಕರು ಸೇರಿದಂತೆ 100ಕ್ಕೂ ಹೆಚ್ಚು ಪ್ರದರ್ಶಕರೊಂದಿಗೆ ಎಲ್ಲ ಸಭೆಗಳು, ಚರ್ಚೆಗಳು, ಸಂವಹನಗಳು ಸಕಾರಾತ್ಮಕ ಒಪ್ಪಂದಗಳಾಗಿ ರೂಪುಗೊಳ್ಳುತ್ತಿವೆ. ಅಂತಿಮವಾಗಿ ಪೂರೈಕೆ ಸರಪಳಿ ಮತ್ತು ರಫ್ತುಗಳಲ್ಲಿರುವ ರೈತರು ಸಾವಯವ ಉತ್ಪನ್ನಗಳನ್ನು ರಫ್ತು ಮಾಡುವ ಮತ್ತು ಮಾರಾಟ ಮಾಡುವ ವಿಷಯದಲ್ಲಿ ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುತ್ತಾರೆ ಎಂದು ದೇವ್ ಆಶಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.