
ಮುಂಬೈ: ದೇಶದ ಷೇರುಪೇಟೆಗಳಲ್ಲಿ ಗುರುವಾರ ನಡೆದ ವಹಿವಾಟುಗಳಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳ ಮೌಲ್ಯವು ತೀವ್ರವಾಗಿ ಕುಸಿದಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಬಿಎಸ್‌ಇ ಸೆನ್ಸೆಕ್ಸ್ 558 ಅಂಶ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ಎನ್‌ಎಸ್‌ಇ ನಿಫ್ಟಿ 146ರಷ್ಟು ಕುಸಿದಿವೆ.
ಎ.ಐ ಕಾರಣದಿಂದಾಗಿ ಉಂಟಾಗಬಹುದಾದ ಬದಲಾವಣೆಗಳ ಕುರಿತ ಭೀತಿ ಹಾಗೂ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿಮೆ ಮಾಡಬಹುದು ಎಂಬ ಭರವಸೆ ಕಡಿಮೆ ಆಗುತ್ತಿರುವುದು ಇದಕ್ಕೆ ಕಾರಣ ಎಂದು ವರ್ತಕರು ತಿಳಿಸಿದ್ದಾರೆ.
ತಂತ್ರಜ್ಞಾನ ವಲಯದ ಟೆಕ್ ಮಹೀಂದ್ರ, ಇನ್ಫೊಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಗಳ ಷೇರುಗಳು ಗರಿಷ್ಠ ಶೇ 6ರವರೆಗೆ ಇಳಿಕೆ ಕಂಡಿವೆ.
ಟಿಸಿಎಸ್ ಕಂಪನಿಯ ಷೇರುಮೌಲ್ಯವು ಶೇ 5.41ರಷ್ಟು ಕುಸಿದಿದ್ದು, ಇದರ ಪರಿಣಾಮವಾಗಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹10 ಲಕ್ಷ ಕೋಟಿಗಿಂತ ಕಡಿಮೆ ಆಗಿದೆ. ದೇಶದ ಅತ್ಯಂತ ಮೌಲ್ಯಯುತ ಕಂಪನಿಗಳ ಪಟ್ಟಿಯಲ್ಲಿ ಟಿಸಿಎಸ್ ಈಗ ಆರನೆಯ ಸ್ಥಾನದಲ್ಲಿದೆ.
‘ಎ.ಐ. ಕಾರಣದಿಂದಾಗಿ ಉಂಟಾಗಬಹುದಾದ ಪಲ್ಲಟಗಳಿಗೆ ಸಂಬಂಧಿಸಿದ ಕಳವಳಗಳು ಹೆಚ್ಚಾಗುತ್ತಿವೆ. ಇದರ ಜೊತೆಯಲ್ಲಿ, ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿ ದರವನ್ನು ತಗ್ಗಿಸಬಹುದು ಎಂಬ ನಿರೀಕ್ಷೆಯು ಕಡಿಮೆ ಆಗಿದೆ. ಹೀಗಾಗಿ ಐ.ಟಿ. ಕಂಪನಿಗಳ ಸೂಚ್ಯಂಕವು ಕುಸಿದಿದೆ’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.