
ನವದೆಹಲಿಯಿಂದ ಹೈದರಾಬಾದ್‌ಗೆ ಮಂಗಳವಾರ ಚೊಚ್ಚಲ ಪ್ರಯಾಣ ಬೆಳೆಸಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನ ಬಿ787– 9 ವಿಮಾನದ ಸಿಬ್ಬಂದಿ ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಬೆಲ್ ವಿಲ್ಸನ್ ಅವರ ಜೊತೆ ಹೈದರಾಬಾದ್‌ನ ಬೇಗಂಪೇಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಛಾಯಾಚಿತ್ರ ತೆಗೆಸಿಕೊಂಡರು
ಹೈದರಾಬಾದ್: ಏರ್ ಇಂಡಿಯಾಕ್ಕಾಗಿಯೇ ತಯಾರಿಸಲಾದ ವಿಶಿಷ್ಟ ಒಳಾಂಗಣ ವ್ಯವಸ್ಥೆಯ ಬೋಯಿಂಗ್ 737–9 ಐಷಾರಾಮಿ ವಿಮಾನವನ್ನು ಇಲ್ಲಿ ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ಮಾರ್ಕ್ ವಿಟಿ –ಎಡಬ್ಲ್ಯುಎ ನೋಂದಣಿಯ ಈ ವಿಮಾನ ಸಂಪೂರ್ಣವಾಗಿ ಬೋಯಿಂಗ್ ವಿಮಾನ ಕಾರ್ಖಾನೆಯಲ್ಲೇ ತಯಾರಾಗಿದೆ. ಏರ್ ಇಂಡಿಯಾ ಸಂಸ್ಥೆಗಾಗಿ ತಯಾರಿಕಾ ಹಂತದಲ್ಲೇ ಪೂರ್ತಿ ಹೊಸತನದಿಂದ ವಿನ್ಯಾಸಗೊಳಿಸಲಾಗಿದೆ. ಈ ವಿಮಾನವು ಇದೇ 11ರಂದು ಏರ್ ಇಂಡಿಯಾ ತೆಕ್ಕೆಗೆ ಸೇರಿದೆ. ಫೆ 1ರಿಂದ ಮುಂಬೈ – ಫ್ರಾಂಕ್‌ಫರ್ಟ್ ನಡುವೆ ಹಾರಾಟ ನಡೆಸುವ ಮೂಲಕ ವಾಣಿಜ್ಯ ಸೇವೆಯನ್ನು ಆರಂಭಿಸಲಿದೆ.
ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಬೆಲ್ ವಿಲ್ಸನ್, ‘ಮೂರು ವರ್ಷಗಳ ಹಿಂದೆ ಸಂಸ್ಥೆಯು 470 ವಿಮಾನಗಳ ಖರೀದಿಗೆ ಬೋಯಿಂಗ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅದರ ಮೊದಲ ವಿಮಾನ ಬೋಯಿಂಗ್ 787-9 ಸಂಸ್ಥೆಗೆ ಸೇರ್ಪಡೆಯಾಗಿದೆ. ವಿಹಾನ್. ಎಐ ರೂಪಾಂತರ ಕಾರ್ಯಕ್ರಮದ ಮಹತ್ವದ ಕ್ಷಣವಿದು. ಇಂತಹದ್ದೇ ಇನ್ನೂ 19 ವಿಮಾನಗಳು ತಯಾರಾಗುತ್ತಿವೆ. ಇಂತಹದ್ದೇ ಒಳಾಂಗಣ ವಿನ್ಯಾಸವನ್ನು ಸಂಸ್ಥೆಯ ಎಲ್ಲ 26 ಬೋಯಿಂಗ್ 787-8 ವಿಮಾನಗಳಲ್ಲೂ ಅಳವಡಿಸಲಾಗುತ್ತದೆ’ ಎಂದರು.
ಐಷಾರಾಮಿ ವಿಮಾನದಲ್ಲಿ 296 ಆಸನಗಳು:
ಈ ವಿಮಾನದಲ್ಲಿ ಬ್ಯುಸಿನೆಸ್, ಪ್ರೀಮಿಯಂ ಎಕಾನಮಿ ಹಾಗೂ ಎಕಾನಮಿ ಎಂಬ ಮೂರು ಕ್ಯಾಬಿನ್ ದರ್ಜೆಗಳಿದ್ದು ಒಟ್ಟು 296 ಆಸನಗಳಿವೆ. ಬ್ಯುಸಿನೆಸ್ ದರ್ಜೆಯಲ್ಲಿ 1–2–1 ವಿನ್ಯಾಸದ ಐಷಾರಾಮಿ ಆಸನ ವ್ಯವಸ್ಥೆ ಇದೆ. ಬ್ಯುಸಿನೆಸ್ ದರ್ಜೆ ಪ್ರಯಾಣಿಕರಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಇದೆ. 17 ಇಂಚಿನ 4 ಕೆ ರೆಸಲ್ಯೂಷನ್‌ನ ಕ್ಯುಎಲ್‌ಇಡಿ ಎಚ್‌ಡಿಆರ್ ಟಚ್‌ಸ್ಕ್ರೀನ್ ಮತ್ತು ಒಳಾಂಗಣ ಮನರಂಜನಾ ವ್ಯವಸ್ಥೆಯ ಹ್ಯಾಂಡ್‌ಸೆಟ್, ಬ್ಲೂಟೂತ್ ಹೆಡ್‌ಫೋನ್ ಪೇರಿಂಗ್, ವೈರ್‌ಲೆಸ್ ಚಾರ್ಜಿಂಗ್ ಸೌಕರ್ಯವಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದರು.
‘ಪ್ರೀಮಿಯಂ ಎಕಾನಮಿ ದರ್ಜೆಯಲ್ಲಿ 2-3-2 ವಿನ್ಯಾಸದಲ್ಲಿ 28 ಆಸನಗಳಿವೆ. 13.3-ಇಂಚಿನ 4 ಕೆ ರೆಸಲ್ಯೂಷನ್‌ನ ಕ್ಯುಎಲ್‌ಇಡಿ ಎಚ್‌ಡಿಆರ್ ಟಚ್‌ಸ್ಕ್ರೀನ್ ಒದಗಿಸಲಾಗಿದೆ. ಎಕಾನಮಿ ದರ್ಜೆಯಲ್ಲಿ 3-3-3 ವಿನ್ಯಾಸದ, ಸುರಕ್ಷಿತ ಹಾಗೂ ಆರಾಮದಾಯಕ 238 ಆಸನಗಳಿವೆ. 11.6-ಇಂಚಿನ 4 ಕೆ ರೆಸಲ್ಯೂಷನ್‌ನ ಕ್ಯುಎಲ್‌ಇಡಿ ಎಚ್‌ಡಿಆರ್ ಟಚ್‌ಸ್ಕ್ರೀನ್ ಹೊಂದಿದೆ. ಮೂರೂ ದರ್ಜೆಯ ಕ್ಯಾಬಿನ್‌ಗಳಲ್ಲೂ ಟೈಪ್ ಎ ಮತ್ತು ಟೈಪ್ ಸಿ ಫಾಸ್ಟ್ ಚಾರ್ಜಿಂಗ್ ಪೋರ್ಟ್‌ಗಳು ಲಭ್ಯ. ಭಾರತೀಯ ಪುರಾತನ ಆರೋಗ್ಯ ಸಂಪ್ರದಾಯಗಳಿಂದ ಪ್ರೇರಿತವಾದ ಮೂಡ್ ಲೈಟಿಂಗ್ ಇದರ ಇನ್ನೊಂದು ವಿಶೇಷ‘ ಎಂದರು.
‘ವಿಂಗ್ಸ್ ಇಂಡಿಯಾ 2026‘ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲು ಈ ವಿಮಾನವು ದೆಹಲಿಯಿಂದ ಹೈದರಾಬಾದ್‌ನ ಬೇಗಂಪೆಟ್ ವಿಮಾನ ನಿಲ್ದಾಣಕ್ಕೆ ಮಂಗಳವಾರ ಪ್ರಯಾಣಿಕರೊಂದಿಗೆ ತನ್ನ ಚೊಚ್ಚಲ ಪ್ರಯಾಣ ಬೆಳೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.