ADVERTISEMENT

ಏರ್‌ ಇಂಡಿಯಾ: ಕೊನೆ ಕ್ಷಣ ಟಿಕೆಟ್‌ ಬುಕಿಂಗ್‌ ದರ ಕಡಿತ

ಪಿಟಿಐ
Published 10 ಮೇ 2019, 18:00 IST
Last Updated 10 ಮೇ 2019, 18:00 IST
ಏರ್‌ ಇಂಡಿಯಾ
ಏರ್‌ ಇಂಡಿಯಾ   

ಮುಂಬೈ : ಕೊನೆ ಕ್ಷಣದಲ್ಲಿ ಬುಕಿಂಗ್‌ ಮಾಡುವ ಟಿಕೆಟ್‌ ದರಗಳಲ್ಲಿ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ(ಏ.ಐ) ಭಾರಿ ಕಡಿತ ಘೋಷಿಸಿದೆ.

ಖಾಸಗಿ ವಿಮಾನ ಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ತಾತ್ಕಾಲಿಕವಾಗಿ ತನ್ನ ಸೇವೆ ಸ್ಥಗಿತಗೊಳಿಸಿದ ನಂತರ ವಿಮಾನ ಪ್ರಯಾಣ ದರಗಳಲ್ಲಿ ಅತಿಯಾದ ಏರಿಕೆ ಕಂಡು ಬಂದಿದೆ.

ಪ್ರಯಾಣ ಕೈಗೊಳ್ಳುವ ಕೆಲವೇ ಗಂಟೆಗಳ ಮುಂಚೆ ಖರೀದಿಸುವ ಟಿಕೆಟ್‌ ದರಗಳಲ್ಲಿ ಭಾರಿ ಕಡಿತ ಘೋಷಿಸಿರುವ ‘ಏ.ಐ’ದ ಈ ನಿರ್ಧಾರವು ಪ್ರಯಾಣಿಕರ ಪಾಲಿಗೆ ಭಾರಿ ನೆಮ್ಮದಿ ನೀಡಲಿದೆ.

ADVERTISEMENT

ವಿಮಾನ ಹೊರಡುವ ಮೂರು ಗಂಟೆ ಒಳಗೆ ಖರೀದಿಸುವ ಟಿಕೆಟ್‌ಗಳ ದರದಲ್ಲಿ ಭಾರಿ ಕಡಿತ ಪ್ರಕಟಿಸಲಾಗಿದೆ. ಕಡಿತದ ಪ್ರಮಾಣ ಎಷ್ಟು ಎನ್ನುವುದನ್ನು ಖಚಿತವಾಗಿ ತಿಳಿಸಿಲ್ಲ.ಈ ಬೆಲೆ ಕಡಿತದ ಪ್ರಮಾಣವು ಶೇ 50ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

ಸಾಮಾನ್ಯವಾಗಿ ಕೊನೆ ಕ್ಷಣದಲ್ಲಿ ಟಿಕೆಟ್‌ ಖರೀದಿಸುವ ಗ್ರಾಹಕರು ಟಿಕೆಟ್‌ ಬೆಲೆಗಿಂತ ಶೇ 40 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆ ಪಾವತಿಸಬೇಕಾಗುತ್ತದೆ. ಜೆಟ್‌ ಏರ್‌ವೇಸ್‌ ಸ್ಥಗಿತಗೊಂಡಿರುವುದರಿಂದ ಸೀಟುಗಳ ಬೇಡಿಕೆ ಮತ್ತು ಲಭ್ಯತೆ ನಡುವಣ ಅಸಮತೋಲನದಿಂದಾಗಿ ದರಗಳು ದುಬಾರಿಯಾಗಿವೆ. ತುರ್ತು ಪ್ರಯಾಣ ಕೈಗೊಳ್ಳುವವರು ಇನ್ನು ಮುಂದೆ ಅಗ್ಗದ ದರದಲ್ಲಿ ಟಿಕೆಟ್‌ ಖರೀದಿಸಬಹುದಾಗಿದೆ.

ನಿಲ್ದಾಣಗಳಲ್ಲಿನ ಏ.ಐ ಕೌಂಟರ್‌, ಅಂತರ್ಜಾಲ ತಾಣ, ಮೊಬೈಲ್‌ ಆ್ಯಪ್‌ ಅಥವಾ ಏಜೆಂಟರ ಮೂಲಕ ಟಿಕೆಟ್‌ ಕಾದಿರಿಸ
ಬಹುದು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.