ADVERTISEMENT

ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆ ಈ ವರ್ಷ ನಡೆಯೋದು ಅನುಮಾನ, ಯಾಕೆ?

ಪಿಟಿಐ
Published 20 ಡಿಸೆಂಬರ್ 2020, 10:02 IST
Last Updated 20 ಡಿಸೆಂಬರ್ 2020, 10:02 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ನವದೆಹಲಿ: ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆ ಪ್ರಸಕ್ತ ಹಣಕಾಸು ವರ್ಷದ (2020–2021) ಇನ್ನುಳಿದ ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ. ಹೀಗಾಗಿ ಮುಂದಿನ ಹಣಕಾಸು ವರ್ಷದಲ್ಲಿ ನಡೆಯಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಾಟಾ ಗ್ರೂಪ್ ಮತ್ತು ಅಮೆರಿಕ ಮೂಲದ ಫಂಡ್ ಇಂಟರಪ್ಸ್ ಇಂಕ್‌ ಸೇರಿದಂತೆ ಹಲವು ಕಂಪನಿಗಳು ಕಳೆದ ವಾರ ಏರ್ ಇಂಡಿಯಾ ಖರೀದಿಗೆ ಪ್ರಾಥಮಿಕ ಬಿಡ್ ಸಲ್ಲಿಸಿದ್ದವು.

200 ಮಂದಿ ಏರ್‌ ಇಂಡಿಯಾ ಉದ್ಯೋಗಿಗಳ ಗುಂಪೊಂದು ಕೂಡ ಕಂಪನಿಗಳ ಸಹಭಾಗಿತ್ವದೊಂದಿಗೆ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಸಕ್ತಿಯಿರುವುದಾಗಿ ಮನವಿ ಸಲ್ಲಿಸಿತ್ತು. ಪ್ರಾಥಮಿಕ ಬಿಡ್ ಸಲ್ಲಿಕೆಗೆ ನಿಗದಿಪಡಿಸಲಾಗಿದ್ದ ಡಿಸೆಂಬರ್ 14ರ ಗಡುವು ಸಮೀಪಿಸುತ್ತಿದ್ದಂತೆ ಈ ಮನವಿ ಸಲ್ಲಿಕೆಯಾಗಿತ್ತು.

ADVERTISEMENT

‘ಅರ್ಹ ಬಿಡ್ಡರ್‌ಗಳ ಬಗ್ಗೆ ಜನವರಿ 6ರ ಒಳಗೆ ವಹಿವಾಟು ಸಲಹೆಗಾರರು ಮಾಹಿತಿ ನೀಡಲಿದ್ದು, ಬಳಿಕ ಬಿಡ್ಡರ್‌ಗಳಿಗೆ ಏರ್ ಇಂಡಿಯಾದ ‘ವರ್ಚುವಲ್ ಡೇಟಾ ರೂಮ್‌’ಗೆ (ವಿಡಿಆರ್‌) ಪ್ರವೇಶ ನೀಡಲಾಗುವುದು’ ಎಂದೂ ಅಧಿಕಾರಿ ತಿಳಿಸಿದ್ದಾರೆ.

ಷೇರು ಖರೀರಿ ಒಪ್ಪಂದದ ಬಗ್ಗೆ ಬಿಡ್ಡರ್‌ಗಳಿಗೆ ಮಾಹಿತಿ ನೀಡಲಾಗುವುದು. ನಂತರ ಬಿಡ್‌ಗಳನ್ನು ಆಹ್ವಾನಿಸಲಾಗುವುದು ಎಂದು ಅವರು ಹೇಳಿದ್ದಾರೆ.

‘ವಿಡಿಆರ್‌ಗೆ ಪ್ರವೇಶ ಪಡೆದ ಬಳಿಕ ಬಿಡ್ ಸಲ್ಲಿಸುವುದಕ್ಕೂ ಮುನ್ನ ಬಿಡ್ ಸಲ್ಲಿಸುವರರು ಅನೇಕ ಪ್ರಶ್ನೆಗಳನ್ನು ಕೇಳಬಹುದೆಂಬ ನಿರೀಕ್ಷೆ ಇದೆ. ಹೀಗಾಗಿ ವಹಿವಾಟು ಮುಂದಿನ ಹಣಕಾಸು ವರ್ಷದಲ್ಲಿ ನಡೆಯಲಿದೆ’ ಎಂದೂ ಅವರು ಹೇಳಿದ್ದಾರೆ.

ನಷ್ಟ ಅನುಭವಿಸುತ್ತಿರುವ ಏರ್ ಇಂಡಿಯಾದ ಶೇ 100ರಷ್ಟು ಬಂಡವಾಳವನ್ನು ಸರ್ಕಾರ ಮಾರಾಟ ಮಾಡಲಿದೆ. 2007ರಲ್ಲಿ ಏರ್‌ ಇಂಡಿಯಾ ಮತ್ತು ಇಂಡಿಯನ್‌ ಏರ್‌ಲೈನ್ಸ್ ಅನ್ನು ವಿಲೀನಗೊಳಿಸಲಾಗಿತ್ತು.

ಬಂಡವಾಳ ಮಾರಾಟ ಪ್ರಕ್ರಿಯೆಯು ಕೋವಿಡ್–19 ಸಾಂಕ್ರಾಮಿಕದಿಂದಾಗಿ ವಿಳಂಬಗೊಂಡಿತ್ತು. ಪ್ರಾಥಮಿಕ ಬಿಡ್ ಸಲ್ಲಿಕೆ ಗಡುವನ್ನು ಸರ್ಕಾರ ಐದು ಬಾರಿ ಮುಂದೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.