ADVERTISEMENT

ಹಬ್ಬದ ಮಾರಾಟ: ಮೊದಲ ದಿನವೇ ₹750 ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ ಮಾರಿದ ಅಮೆಜಾನ್‌

ಪಿಟಿಐ
Published 29 ಸೆಪ್ಟೆಂಬರ್ 2019, 16:22 IST
Last Updated 29 ಸೆಪ್ಟೆಂಬರ್ 2019, 16:22 IST
   

ನವದೆಹಲಿ: ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಕಂಪನಿಗಳು ಹಬ್ಬದ ಮಾರಾಟ ಕೊಡುಗೆಗಳಿಗೆ ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ.

ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ನಲ್ಲಿ36 ಗಂಟೆಯೊಳಗೆ ಒಟ್ಟಾರೆ ₹750 ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿರುವುದಾಗಿ ಅಮೆಜಾನ್‌ ತಿಳಿಸಿದೆ.‌

ಒನ್‌ಪ್ಲಸ್‌, ಸ್ಯಾಮ್ಸಂಗ್‌ ಮತ್ತು ಆ್ಯಪಲ್‌ನಂತಹ ಪ್ರೀಮಿಯಂ ಬ್ರ್ಯಾಂಡ್‌ನ ಫೋನ್‌ಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಹೇಳಿದೆ.

ADVERTISEMENT

‘ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೈಮ್‌ ಸದಸ್ಯರು ಸೇರ್ಪಡೆಯಾಗಿದ್ದಾರೆ. ದಾಖಲೆ ಮಟ್ಟದಲ್ಲಿ ಗ್ರಾಹಕರು ಮತ್ತು ಮಾರಾಟಗಾರರು ಭಾಗವಹಿಸಿದ್ದರು’ ಎಂದು ಅಮೆಜಾನ್‌ ಗ್ಲೋಬಲ್‌ನ ಹಿರಿಯ ಉಪಾಧ್ಯಕ್ಷ ಮತ್ತು ಭಾರತದ ಮುಖ್ಯಸ್ಥ ಅಮಿತ್‌ ಅಗರ್ವಾಲ್‌ ತಿಳಿಸಿದ್ದಾರೆ.

‘ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಿಂದ ಶೇ 91 ರಷ್ಟು ಹೊಸ ಗ್ರಾಹಕರು ಖರೀದಿ ನಡೆಸಿದ್ದಾರೆ. ಫ್ಯಾಷನ್‌ ಮತ್ತು ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಹೆಚ್ಚಿನ ಗಮನ ನೀಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯಬಿಗ್‌ ಬಿಲಿಯನ್‌ ಡೇಸ್‌ನ ಮೊದಲ ದಿನವೇ ಎರಡು ಪಟ್ಟು ಮಾರಾಟ ಪ್ರಗತಿ ದಾಖಲಿಸಿರುವುದಾಗಿ ಫ್ಲಿಪ್‌ಕಾರ್ಟ್‌ ಹೇಳಿದೆ.

ಎರಡೂ ಕಂಪನಿಗಳು ತಮ್ಮ ಮೊದಲ ದಿನದ ಒಟ್ಟಾರೆ ಮಾರಾಟದ ಮೌಲ್ಯವನ್ನು ತಿಳಿಸಿಲ್ಲ. ಭಾನುವಾರದಿಂದ ಅಕ್ಟೋಬರ್‌ 4ರವರೆಗೆ ಹಬ್ಬದ ಮಾರಾಟ ನಡೆಯಲಿದೆ.

‘ಕಳೆದ ವರ್ಷಕ್ಕಿಂತಲೂ ಉತ್ತಮ ಮಾರಾಟ ಪ್ರಗತಿ ಸಾಧಿಸುವ ವಿಶ್ವಾಸವಿದೆ. ಅತಿದೊಡ್ಡ ಹಬ್ಬದ ಮಾರಾಟ ಅವಧಿ ಇದಾಗಲಿದೆ’ ಎಂದು ಫ್ಲಿಪ್‌ಕಾರ್ಟ್ ಸಮೂಹದ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.