ADVERTISEMENT

ಅಮೆಜಾನ್‌ ಭಾರತದಲ್ಲಿ 50,000 ತಾತ್ಕಾಲಿಕ ಉದ್ಯೋಗಗಳಿಗೆ ನೇಮಕಾತಿ

ಏಜೆನ್ಸೀಸ್
Published 22 ಮೇ 2020, 11:46 IST
Last Updated 22 ಮೇ 2020, 11:46 IST
ಅಮೆಜಾನ್‌ ಇ–ಕಾಮರ್ಸ್‌
ಅಮೆಜಾನ್‌ ಇ–ಕಾಮರ್ಸ್‌    

ಬೆಂಗಳೂರು: ದೇಶದಲ್ಲಿ ಆನ್‌ಲೈನ್‌ ಶಾಪಿಂಗ್‌ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆಜಾನ್‌ ಇಂಡಿಯಾ ತಾತ್ಕಾಲಿಕವಾಗಿ 50,000 ಜನರಿಗೆ ಉದ್ಯೋಗ ನೀಡಲು ಮುಂದಾಗಿದೆ. ಕೋವಿಡ್‌–19 ಲಾಕ್‌ಡೌನ್‌ನಿಂದ ಗ್ರಾಹಕರು ಮನೆಯಲ್ಲಿಯೇ ಉಳಿದಿರುವುದು ಹಾಗೂ ಸರ್ಕಾರ ಬಹುತೇಕ ವಸ್ತುಗಳ ಆನ್‌ಲೈನ್‌ ಮಾರಾಟಕ್ಕೆ ಸಮ್ಮತಿಸಿರುವುದರಿಂದ ಇ–ಕಾಮರ್ಸ್‌ ವಲಯ ಮತ್ತಷ್ಟು ವಿಸ್ತರಿಸಿಕೊಳ್ಳುವ ಅವಕಾಶ ತೆರೆದುಕೊಂಡಿದೆ.

ಕಂಟೈನ್‌ಮೆಂಟ್‌ ವಲಯಗಳನ್ನು ಹೊರತು ಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಇ–ಕಾಮರ್ಸ್‌ ಸಂಸ್ಥೆಗಳು ಕಾರ್ಯಾಚರಿಸಲು ಸರ್ಕಾರದ ನಿಯಮಾವಳಿಗಳಿಂದ ಅವಕಾಶ ದೊರೆತಿದೆ. ಲಾಕ್‌ಡೌನ್‌ ಆರಂಭದಲ್ಲಿ ತೀವ್ರ ಪೆಟ್ಟು ಅನುಭವಿಸಿರುವ ಇ–ಕಾಮರ್ಸ್‌ ಕಂಪನಿಗಳು ಇದೀಗ ವಹಿವಾಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿವೆ. 'ಗ್ರಾಹಕರು ಬಯಸುವ ಎಲ್ಲವನ್ನೂ ಮನೆಯ ಬಾಗಿಲಿಗೇ ತಲುಪಿಸುವುದರಲ್ಲಿ ನಮ್ಮ ಸಹಾಯ ಮುಂದುವರಿಸಲಿದ್ದೇವೆ. ಇದರಿಂದಾಗಿ ಜನರು ಅಂತರ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ' ಎಂದು ಅಮೆಜಾನ್‌ ಹಿರಿಯ ಕಾರ್ಯನಿರ್ವಾಹಕ ಅಖಿಲ್‌ ಸಕ್ಸೇನಾ ಹೇಳಿದ್ದಾರೆ.

ಇದರಿಂದಾಗಿ ಅವಕಾಶ ಇರುವಷ್ಟು ಜನರು ಕಾರ್ಯನಿರ್ವಹಿಸಲಿದ್ದಾರೆ. ಅವರಿಗೆಲ್ಲ ಕಾರ್ಯಾಚರಣೆಗೆ ಅಗತ್ಯ ಸುರಕ್ಷಿತ ವಾತಾವರಣ ನಿರ್ಮಿಸಲಾಗುತ್ತಿದೆ. ತಾತ್ಕಾಲಿಕವಾಗಿ ನೇಮಕವಾಗುವಸಿಬ್ಬಂದಿ, ಅಮೆಜಾನ್‌ನ ಪೂರೈಕೆ ಕೇಂದ್ರಗಳಲ್ಲಿ ಹಾಗೂ ವಸ್ತುಗಳ ಡೆಲಿವೆರಿ ಸಂಪರ್ಕದ ಭಾಗವಾಗಿ ಕಾರ್ಯನಿರ್ವಹಿಸಲಿದ್ದಾರೆ.

ADVERTISEMENT

ಜೆಫ್‌ ಬೆಜೋಸ್‌ ನೇತೃತ್ವದ ಅಮೆಜಾನ್‌ ಭಾರತದಲ್ಲಿ ವಾಲ್‌ಮಾರ್ಟ್‌ ಸ್ವಾಮ್ಯದ ಫ್ಲಿಪ್‌ಕಾರ್ಟ್‌ನಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ಅಮೆಜಾನ್‌ 2025ರ ವೇಳೆಗೆ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹಿಂದೆ ಹೇಳಿಕೊಂಡಿತ್ತು. ಆಹಾರ ಪೂರೈಸುವ ವಲಯಕ್ಕೂ ವಿಸ್ತರಿಸಿಕೊಳ್ಳುವ ಯೋಜನೆಯನ್ನು ಅಮೆಜಾನ್‌ ಹೊರಹಾಕಿದೆ. ಓಲಾ, ಜೊಮ್ಯಾಟೊ, ಸ್ವಿಗ್ಗಿ, ಉಬರ್‌ನಂತರ ತಂತ್ರಜ್ಞಾನ ಆಧಾರಿತ ಉದ್ಯಮಗಳು ಸಿಬ್ಬಂದಿ ಕಡಿತಗೊಳಿಸುತ್ತಿರುವುದಾಗಿ ಪ್ರಕಟಿಸುತ್ತಿರುವ ಬೆನ್ನಲ್ಲೇ ಅಮೆಜಾನ್‌ ಕೆಲಸ ನೀಡುವುದಾಗಿ ಹೇಳಿರುವುದು ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.