ADVERTISEMENT

10 ಲಕ್ಷ ಉದ್ಯೋಗ ಸೃಷ್ಟಿ; ಇ–ಕಾಮರ್ಸ್‌ನ ದೈತ್ಯ ಸಂಸ್ಥೆ ಅಮೆಜಾನ್‌ ಘೋಷಣೆ

ಪಿಟಿಐ
Published 17 ಜನವರಿ 2020, 19:45 IST
Last Updated 17 ಜನವರಿ 2020, 19:45 IST
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಗೆಳತಿ ಜತೆ ಭಾಗವಹಿಸಿದ್ದ ಅಮೆಜಾನ್ ಸಿಇಒ ಜೆಫ್‌ ಬೆಜೊಸ್‌ – ಪಿಟಿಐ ಚಿತ್ರ
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಗೆಳತಿ ಜತೆ ಭಾಗವಹಿಸಿದ್ದ ಅಮೆಜಾನ್ ಸಿಇಒ ಜೆಫ್‌ ಬೆಜೊಸ್‌ – ಪಿಟಿಐ ಚಿತ್ರ   

ನವದೆಹಲಿ : ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 10 ಲಕ್ಷ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿ ವಿಶ್ವದ ಅತಿದೊಡ್ಡ ಆನ್‌ಲೈನ್‌ ಖರೀದಿ ತಾಣವಾಗಿರುವ ಅಮೆಜಾನ್‌ ಪ್ರಕಟಿಸಿದೆ.

ಭಾರತದಲ್ಲಿ ₹ 7 ಸಾವಿರ ಕೋಟಿ ಹೂಡಿಕೆ ಮಾಡುವ ಅಮೆಜಾನ್ ನಿರ್ಧಾರದಿಂದಾಗಿ ಭಾರತಕ್ಕೆ ಯಾವುದೇ ಪ್ರಯೋಜನ ಆಗದು ಎಂದು ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಟೀಕೆಗೆ ಪ್ರತ್ಯುತ್ತರವಾಗಿ ಈ ಹೇಳಿಕೆ ಹೊರ ಬಿದ್ದಿದೆ.

‘ಐ.ಟಿ, ಕೌಶಲ ಅಭಿವೃದ್ಧಿ, ಮಾಹಿತಿ ಸೃಷ್ಟಿ, ರಿಟೇಲ್‌, ಸರಕು ಸಾಗಣೆ ಮತ್ತು ತಯಾರಿಕೆ ಕ್ಷೇತ್ರಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 10 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲು ಅಮೆಜಾನ್‌ ಯೋಜನೆ ಹಾಕಿಕೊಂಡಿದೆ’ ಎಂದು ಕಂಪನಿಯ ಸ್ಥಾಪಕ ಮತ್ತು ಸಿಇಒ ಜೆಫ್‌ ಬೆಜೊಸ್‌ ಹೇಳಿದ್ದಾರೆ.

ADVERTISEMENT

ಹಿಂದಿನ 6 ವರ್ಷಗಳಲ್ಲಿ ಅಮೆಜಾನ್‌ ಭಾರತದಲ್ಲಿ ತೊಡಗಿಸಿದ ಬಂಡವಾಳದಿಂದ ಸೃಷ್ಟಿಯಾಗಿರುವ 7 ಲಕ್ಷ ಉದ್ಯೋಗಳಿಗೆ ಈ ಹೊಸ ಉದ್ಯೋಗ ಅವಕಾಶಗಳು ಪೂರಕವಾಗಿರಲಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳನ್ನು ಆನ್‌ಲೈನ್‌ ವಹಿವಾಟಿಗೆ ಸೇರ್ಪಡೆಗೊಳಿಸಿ ಅವುಗಳ ರಫ್ತು ಹೆಚ್ಚಿಸಲು ₹ 7,000 ಕೋಟಿ ಮೊತ್ತದ ಬಂಡವಾಳ ತೊಡಗಿಸಲಾಗುವುದು. ಇದರಿಂದ 2025ರ ವೇಳೆಗೆ ಭಾರತದಲ್ಲಿಯೇ ತಯಾರಿಸಿದ ಸರಕುಗಳ ₹ 70 ಸಾವಿರ ಕೋಟಿ ಮೊತ್ತದ ರಫ್ತು ವಹಿವಾಟು ಸಾಧ್ಯವಾಗಲಿದೆ ಎಂದು ಬೆಜೊಸ್‌ ಅವರು ಬುಧವಾರವಷ್ಟೇ ಪ್ರಕಟಿಸಿದ್ದರು.

ಭಾರತ ಸರ್ಕಾರ ಹಮ್ಮಿಕೊಂಡಿರುವ 2022ರ ವೇಳೆಗೆ 40 ಕೋಟಿ ಜನರ ಕೌಶಲ ಹೆಚ್ಚಿಸಿ ಉದ್ಯೋಗ ಸೃಷ್ಟಿಸುವ ಸಾಮಾಜಿಕ ಸೇರ್ಪಡೆ ಕಾರ್ಯಕ್ರಮಕ್ಕೆ ಅಮೆಜಾನ್‌ ಪ್ರಕಟಿಸಿರುವ ಉದ್ಯೋಗ ಸೃಷ್ಟಿ ಮತ್ತು ಹಣ ಹೂಡಿಕೆಯು ಪೂರಕವಾಗಿರಲಿದೆ ಎಂದು ಕಂಪನಿ ಹೇಳಿದೆ.

‘ಹೂಡಿಕೆದಾರರು ನಿಯಮ ಪಾಲಿಸಲಿ’

ಅಹ್ಮದಾಬಾದ್‌ (ಪಿಟಿಐ): ‘ಕಾನೂನು ಪಾಲಿಸುವ ಎಲ್ಲ ಬಗೆಯ ಬಂಡವಾಳ ಹೂಡಿಕೆಯನ್ನು ಭಾರತದ ಸ್ವಾಗತಿಸುತ್ತದೆ’ ಎಂದು ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

‘ಅಮೆಜಾನ್‌ ವಿರುದ್ಧ ನಾನು ನಕಾರಾತ್ಮಕವಾಗಿ ಏನನ್ನೂ ಹೇಳಿಲ್ಲ. ನಿಯಮ ಮತ್ತು ನಿಯಂತ್ರಣ ಕ್ರಮಗಳಿಗೆ ಅನುಗುಣವಾದ ಹೂಡಿಕೆ ಬರಲಿ ಎಂದಷ್ಟೇ ನಾನು ಹೇಳಿರುವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ರಿಟೇಲ್‌ ವಲಯದಲ್ಲಿನ ದೊಡ್ಡ ಮೊತ್ತದ ಹೂಡಿಕೆಗಳು ಸಣ್ಣ ವರ್ತಕರನ್ನು ಸಂಕಷ್ಟಕ್ಕೆ ದೂಡಬಾರದು. ವಿದೇಶಿ ಹೂಡಿಕೆಯು ಕಾಯ್ದೆ ಉಲ್ಲಂಘಿಸಿದ್ದರೆ ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.