ADVERTISEMENT

ಇಂಧನ: ಅಂಬಾನಿ, ಅದಾನಿ ಪಾಲುದಾರಿಕೆ

ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮಾರಾಟ ಕ್ಷೇತ್ರದಲ್ಲಿ ಸಹಭಾಗಿತ್ವ

ಪಿಟಿಐ
Published 25 ಜೂನ್ 2025, 15:37 IST
Last Updated 25 ಜೂನ್ 2025, 15:37 IST
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ   

ನವದೆಹಲಿ: ದೇಶದ ಶ್ರೀಮಂತ ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರು ಆಟೊಮೊಬೈಲ್‌ ಇಂಧನ ಮಾರಾಟ ಕ್ಷೇತ್ರದಲ್ಲಿ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ಇದು ಈ ಇಬ್ಬರ ನಡುವಿನ ಎರಡನೆಯ ಪಾಲುದಾರಿಕೆ.

ಅಂಬಾನಿ ಅವರು ಬ್ರಿಟನ್ನಿನ ಬಿಪಿ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಜಿಯೊ–ಬಿಪಿ ಕಂಪನಿಯು, ಅದಾನಿ ಟೋಟಲ್ ಗ್ಯಾಸ್‌ ಲಿಮಿಟೆಡ್‌ (ಎಟಿಜಿಎಲ್‌) ಮಾಲೀಕತ್ವದ ಸಿಎನ್‌ಜಿ ಬಂಕ್‌ಗಳಲ್ಲಿ ಗ್ರಾಹಕರಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟ ಮಾಡಲಿದೆ.

ಎಟಿಜಿಎಲ್‌ ಕಂಪನಿಯು ಆಯ್ದ ಜಿಯೊ–ಬಿಪಿ ಬಂಕ್‌ಗಳಲ್ಲಿ ಸಿಎನ್‌ಜಿ ಮಾರಾಟ ಮಾಡಲಿದೆ. ಎಟಿಜಿಎಲ್‌ ಕಂಪನಿಯು ಅದಾನಿ ಸಮೂಹ ಮತ್ತು ಫ್ರಾನ್ಸ್‌ನ ಟೋಟಲ್ ಎನರ್ಜೀಸ್‌ ಸಹಭಾಗಿತ್ವದಲ್ಲಿ ನಡೆಯುತ್ತಿದೆ.

ADVERTISEMENT

ಜಿಯೊ–ಬಿಪಿ ಈಗ ದೇಶದಲ್ಲಿ 1,972 ಬಂಕ್‌ಗಳನ್ನು ಹೊಂದಿದೆ. ಎಟಿಜಿಎಲ್‌ ಕಂಪನಿಯು ವಿವಿಧೆಡೆ ಒಟ್ಟು 650 ಸಿಎನ್‌ಜಿ ಸ್ಟೇಷನ್‌ಗಳನ್ನು ನಡೆಸುತ್ತಿದೆ.

ಮಧ್ಯಪ್ರದೇಶದ ವಿದ್ಯುತ್‌ ಯೋಜನೆಯೊಂದರಲ್ಲಿ ಅಂಬಾನಿ ಮತ್ತು ಅದಾನಿ ಸಹಭಾಗಿತ್ವದ ಒಪ್ಪಂದವನ್ನು ಈ ವರ್ಷದ ಮಾರ್ಚ್‌ನಲ್ಲಿ ಮಾಡಿಕೊಂಡಿದ್ದರು.

ಅಂಬಾನಿ ಮತ್ತು ಅದಾನಿ ಅವರ ನಡುವಿನ ಪಾಲುದಾರಿಕೆಯು ಆಟೊಮೊಬೈಲ್‌ ಇಂಧನ ಮತ್ತು ನೈಸರ್ಗಿಕ ಅನಿಲ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪ್ರಾಬಲ್ಯಕ್ಕೆ ಎದುರಾಗಿರುವ ಸವಾಲು ಎಂದು ವಿಶ್ಲೇಷಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ ದೇಶದ ಪೆಟ್ರೋಲ್‌ ಬಂಕ್‌ಗಳ ಪೈಕಿ ಶೇ 90ರಷ್ಟರ ಮೇಲೆ ನಿಯಂತ್ರಣ ಹೊಂದಿವೆ.

ಅಲ್ಲದೆ, ನೈಸರ್ಗಿಕ ಅನಿಲವನ್ನು ಕೊಳವೆ ಮೂಲಕ ಮನೆಗಳಿಗೆ ಪೂರೈಸುವ ವಹಿವಾಟಿನಲ್ಲಿ ಕೂಡ ಸರ್ಕಾರಿ ಸ್ವಾಮ್ಯದ ಕಂಪನಿಗಳೇ ಪ್ರಾಬಲ್ಯ ಹೊಂದಿವೆ. ಎಟಿಜಿಎಲ್‌ ಕಂಪನಿಯು ನೈಸರ್ಗಿಕ ಅನಿಲವನ್ನು ಮನೆಗಳಿಗೆ, ಕೈಗಾರಿಕೆಗಳಿಗೆ ಮತ್ತು ವಾಹನಗಳಿಗೆ ಪೂರೈಕೆ ಮಾಡುವ ವಹಿವಾಟಿನಲ್ಲಿ ತೊಡಗಿಸಿಕೊಂಡಿದೆ.

ಗೌತಮ್ ಅದಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.