ADVERTISEMENT

ರಾಷ್ಟ್ರೀಯ ನಗರ ಸಹಕಾರಿ ಬ್ಯಾಂಕ್‌: ಆ್ಯಪ್‌ಗಳಿಗೆ ಶಾ ಚಾಲನೆ

ಪಿಟಿಐ
Published 10 ನವೆಂಬರ್ 2025, 14:35 IST
Last Updated 10 ನವೆಂಬರ್ 2025, 14:35 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ಡಿಜಿಟಲ್‌ ಪಾವತಿಯ ಬಳಕೆಯನ್ನು ಹೆಚ್ಚಿಸಲು ‘ಸಹಕಾರ್ ಡಿಜಿ ಪೇ’ ಮತ್ತು ‘ಸಹಕಾರ್‌ ಡಿಜಿ ಲೋನ್‌’ ಎಂಬ ಎರಡು ಮೊಬೈಲ್‌ ಆ್ಯಪ್‌ಗಳಿಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸೋಮವಾರ ಚಾಲನೆ ನೀಡಿದ್ದಾರೆ. 

ನಗದು ರಹಿತ ಪಾವತಿ ವಿಧಾನ ಹೆಚ್ಚುತ್ತಿದ್ದು, ಸಹಕಾರಿ ಬ್ಯಾಂಕ್‌ಗಳ ಉಳಿವಿಗೆ ಡಿಜಿಟಲ್ ಪಾವತಿ ಅಳವಡಿಕೆ ಅಗತ್ಯ. ನಗರ ಸಹಕಾರಿ ಬ್ಯಾಂಕ್‌ಗಳು (ಯುಸಿಬಿ) ಮತ್ತು ಪತ್ತಿನ ಸಹಕಾರ ಸಂಘಗಳ ವೃತ್ತಿಪರತೆ ಹೆಚ್ಚಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 

ದೇಶದ ಸಹಕಾರ ವಲಯದ ಎನ್‌ಪಿಎ ಕಳೆದ ಎರಡು ವರ್ಷದ ಹಿಂದೆ ಶೇ 2.8ರಷ್ಟಿತ್ತು. ಅದು ಈಗ ಶೇ 0.6ಕ್ಕೆ ಇಳಿದಿದೆ. ಎನ್‌ಪಿಎ ಸುಧಾರಣೆ ಕಂಡಿದೆ. ಬ್ಯಾಂಕ್‌ಗಳ ಕಾರ್ಯಾಚರಣೆಯಲ್ಲಿ ಸುಧಾರಣೆ ಮತ್ತು ಆರ್ಥಿಕ ಶಿಸ್ತು ಉಂಟಾಗಿದೆ ಎಂದಿದ್ದಾರೆ.

ADVERTISEMENT

ರಾಷ್ಟ್ರೀಯ ನಗರ ಸಹಕಾರಿ ಬ್ಯಾಂಕ್‌ ಹಾಗೂ ಪತ್ತಿನ ಸಂಸ್ಥೆಗಳ ಒಕ್ಕೂಟವು (ಎನ್‌ಎಎಫ್‌ಸಿಯುಬಿ) ಮುಂದಿನ ಐದು ವರ್ಷದೊಳಗೆ ಎರಡು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಪ್ರತಿ ಪಟ್ಟಣದಲ್ಲಿ ಕನಿಷ್ಠ ಒಂದಾದರೂ ಹೆಚ್ಚುವರಿ ನಗರ ಸಹಕಾರಿ ಬ್ಯಾಂಕ್‌ ಸ್ಥಾಪಿಸುವ ಗುರಿ ಸಾಧಿಸಬೇಕು ಎಂದು ಸೂಚಿಸಿದ್ದಾರೆ. 

‘ಡಿಜಿ ಪೇ ಇಂದು ಅಗತ್ಯವಾಗಿದೆ. ನಗರ ಸಹಕಾರಿ ಬ್ಯಾಂಕ್‌ಗಳು ಈ ಪಾವತಿ ವಿಧಾನಕ್ಕೆ ಹೊಂದಿಕೊಳ್ಳದಿದ್ದರೆ, ಸ್ಪರ್ಧೆಯಿಂದ ಹೊರಗುಳಿಯುತ್ತವೆ. ಎರಡು ವರ್ಷದೊಳಗೆ 1,500 ಬ್ಯಾಂಕ್‌ಗಳು ಈ ಅಪ್ಲಿಕೇಷನ್‌ ಅನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಎನ್‌ಎಫ್‌ಸಿಯುಬಿ ಗೌರವಾಧ್ಯಕ್ಷ ಮತ್ತು ಕರ್ನಾಟಕದ ಕಾನೂನು ಸಚಿವ ಎಚ್‌.ಕೆ.ಪಾಟೀಲ, 20 ನಗರ ಸಹಕಾರಿ ಬ್ಯಾಂಕ್‌ಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇವುಗಳ ಪುನರುಜ್ಜೀವನಕ್ಕೆ ಕ್ರಮ ತೆಗೆದು ಕೊಳ್ಳಬೇಕು ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.