
ಅನಿಲ್ ಅಂಬಾನಿ
ಪಿಟಿಐ ಸಂಗ್ರಹ ಚಿತ್ರ
ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹವು ₹41,921 ಕೋಟಿಗೂ ಹೆಚ್ಚಿನ ಮೊತ್ತದ ಹಣಕಾಸಿನ ಅಕ್ರಮ ಎಸಗಿದೆ ಎಂದು ತನಿಖಾ ವರದಿಗಳನ್ನು ಪ್ರಕಟಿಸುವ ‘ಕೋಬ್ರಾಪೋಸ್ಟ್’ ಆರೋಪ ಹೊರಿಸಿದೆ.
ಸಮೂಹವು 2006ರಿಂದ ತನ್ನ ಕಂಪನಿಗಳಿಂದ ಹಣವನ್ನು ಬೇರೆಡೆ ವರ್ಗಾಯಿಸುವ ಮೂಲಕ ಅಕ್ರಮ ಎಸಗಿದೆ ಎಂದು ಕೋಬ್ರಾಪೋಸ್ಟ್ ದೂರಿದೆ. ಆದರೆ ಈ ಆರೋಪವನ್ನು ಸಮೂಹವು ಅಲ್ಲಗಳೆದಿದೆ. ಸಮೂಹದ ಕಂಪನಿಗಳ ಷೇರುಮೌಲ್ಯ ಕುಸಿಯುವಂತೆ ಮಾಡುವ ದುರುದ್ದೇಶದ ಆರೋಪ ಇದು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬ್ಯಾಂಕ್ ಸಾಲ, ಐಪಿಒ ಹಾಗೂ ಸಾಲಪತ್ರಗಳ ಮೂಲಕ ಸಂಗ್ರಹಿಸಿದ ಅಂದಾಜು ₹28,874 ಕೋಟಿ ಹಣವನ್ನು ಸಮೂಹದ ಕಂಪನಿಗಳಾದ ರಿಲಯನ್ಸ್ ಕಮ್ಯೂನಿಕೇಷನ್ಸ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಹೋಂ ಫೈನಾನ್ಸ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಮತ್ತು ರಿಲಯನ್ಸ್ ಕಾರ್ಪೊರೇಟ್ ಅಡ್ವೈಸರಿ ಸರ್ವಿಸಸ್‌ನಿಂದ ಹೊರತೆಗೆದು, ಪ್ರವರ್ತಕರ ಜೊತೆ ನಂಟು ಹೊಂದಿರುವ ಕೆಲವು ಕಂಪನಿಗಳಿಗೆ ವರ್ಗಾಯಿಸಲಾಗಿದೆ ಎಂದು ವರದಿಯು ಹೇಳಿದೆ.
₹13,047 ಕೋಟಿಯಷ್ಟು ಮೊತ್ತವನ್ನು ಸಿಂಗಪುರ, ಮಾರಿಷಸ್, ಸಿಪ್ರಸ್, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್, ಅಮೆರಿಕ ಮತ್ತು ಬ್ರಿಟನ್‌ನಲ್ಲಿರುವ ಸಂಸ್ಥೆಗಳ ಮೂಲಕ ‘ವಂಚನೆಯ ಬಗೆಯಲ್ಲಿ’ ಭಾರತಕ್ಕೆ ತರಲಾಗಿದೆ ಎಂದು ಕೂಡ ವರದಿಯು ಹೇಳಿದೆ. ಈ ವರ್ಗಾವಣೆಯಲ್ಲಿ ಶೆಲ್ ಕಂಪನಿಗಳ ಬಳಕೆಯಾಗಿದೆ ಎಂದು ಅದು ಹೇಳಿದೆ.
ಸಿಂಗಪುರ ಮೂಲದ ಎಮರ್ಜಿಂಗ್ ಮಾರ್ಕೆಟ್ ಇನ್ವೆಸ್ಟ್‌ಮೆಂಟ್ ಆ್ಯಂಡ್ ಟ್ರೇಡಿಂಗ್ ಎಂಬ ಕಂಪನಿಯು ‘ನಿಗೂಢವಾದ’ ನೆಕ್ಸ್‌ಜೆನ್ ಕ್ಯಾಪಿಟಲ್ ಎಂಬ ಕಂಪನಿಯಿಂದ 750 ಮಿಲಿಯನ್ ಡಾಲರ್ (ಅಂದಾಜು ₹6,647 ಕೋಟಿ) ಪಡೆಯಿತು. ನಂತರ ಆ ಮೊತ್ತವನ್ನು ರಿಲಯನ್ಸ್ ಇನ್ನೊವೆಂಚರ್ಸ್‌ಗೆ ವರ್ಗಾಯಿಸಲಾಯಿತು. ಅದಾದ ನಂತರದಲ್ಲಿ ಸಿಂಗಪುರ ಮೂಲದ ಕಂಪನಿಯನ್ನು ಪರಿಸಮಾಪ್ತಿಗೊಳಿಸಲಾಯಿತು ಎಂದು ಕೋಬ್ರಾಪೋಸ್ಟ್ ಹೇಳಿದೆ. ಈ ವಹಿವಾಟು ಬಹುಶಃ ಹಣದ ಅಕ್ರಮ ವರ್ಗಾವಣೆ ಆಗಿರಬಹುದು ಎಂದು ಹೇಳಿದೆ.
ಕಾರ್ಪೊರೇಟ್ ಹಣವನ್ನು ವೈಯಕ್ತಿಕ ಬಳಕೆಯ ಐಷಾರಾಮಿ ಉತ್ಪನ್ನಗಳನ್ನು ಖರೀದಿಸಲು ಬಳಸಿಕೊಳ್ಳಲಾಗಿದೆ ಎಂದು ಕೂಡ ಆರೋಪಿಸಿದೆ.
ಆರೋಪಗಳನ್ನು ಅಲ್ಲಗಳೆದಿರುವ ರಿಲಯನ್ಸ್ ಸಮೂಹವು, ‘ಇವೆಲ್ಲ ಸಿಬಿಐ, ಇ.ಡಿ, ಸೆಬಿ ಮತ್ತು ಇತರ ಸಂಸ್ಥೆಗಳು ಈಗಾಗಲೇ ಪರಿಶೀಲನೆ ನಡೆಸಿರುವ ಸಂಗತಿಗಳು. ನ್ಯಾಯಸಮ್ಮತವಾದ ವಿಚಾರಣೆಯೊಂದು ಪೂರ್ವಗ್ರಹಪೀಡಿತವಾಗುವಂತೆ ಮಾಡುವ ಸಂಘಟಿತ ಪ್ರಯತ್ನ ಇದು’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.