ನವದೆಹಲಿ: ‘ಕೃತಕ ಬುದ್ಧಿಮತ್ತೆಯಿಂದ (ಎ.ಐ) ಉಂಟಾಗುವ ಪಲ್ಲಟಗಳು ಅಲ್ಪಕಾಲ ಮಾತ್ರ ಇರುತ್ತದೆ, ಮುಂದೆ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದು ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಹೊಸ ಯುಗದ ತಂತ್ರಜ್ಞಾನಗಳಿಗೆ ತಕ್ಕಂತೆ ಪ್ರತಿಭೆಗಳನ್ನು ಸಿದ್ಧಪಡಿಸಲು ರಾಜ್ಯದಲ್ಲಿ ದೊಡ್ಡ ಪ್ರಮಾಣದ ಮರುಕೌಶಲ ಕ್ರಮಗಳು ಜಾರಿಯಲ್ಲಿವೆ. ರಾಜ್ಯ ಸರ್ಕಾರವು ನಾವೀನ್ಯ ಮತ್ತು ಸಹಭಾಗಿತ್ವಕ್ಕೆ ಉತ್ತೇಜನ ನೀಡುತ್ತಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಎ.ಐನಿಂದ ಕೆಲವು ಉದ್ಯೋಗ ನಷ್ಟ ಆಗಬಹುದು. ಆದರೆ ಕೌಶಲ ಹೆಚ್ಚಳದಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅದಕ್ಕಾಗಿಯೇ ನಮಗೆ ಬೃಹತ್ ಮರುಕೌಶಲ ಕಾರ್ಯಕ್ರಮದ ಅಗತ್ಯವಿದೆ’ ಎಂದು ಹೇಳಿದ್ದಾರೆ.
ಮುಂಬರುವ ಆರ್ಥಿಕ ವರ್ಷದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ, ಸೈಬರ್ ಭದ್ರತೆ, ಡಿಜಿಟಲ್ ಫೊರೆನ್ಸಿಕ್ಸ್ ಸೇರಿದಂತೆ ಜಾಗತಿಕವಾಗಿ ಬೇಡಿಕೆ ಇರುವ ತಂತ್ರಜ್ಞಾನದ ಬಗ್ಗೆ 5 ಲಕ್ಷಕ್ಕೂ ಅಧಿಕ ಜನರಿಗೆ ಕೌಶಲ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಹೊಸ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುವ ಕುರಿತು ಕೌಶಲ ಮಂಡಳಿ ಜೊತೆ ಮಾತುಕತೆ ನಡೆಸಲಾಗುತ್ತಿದ್ದು, ಅವರಿಂದ ಪ್ರತಿಕ್ರಿಯೆ ಪಡೆದು ತರಬೇತಿ ನೀಡುವುದನ್ನು ನಿರ್ಧರಿಸಲಾಗುವುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.