ನವದೆಹಲಿ: ಏಥರ್ ಎನರ್ಜಿ ಲಿಮಿಟೆಡ್ ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ₹2,981 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಏಪ್ರಿಲ್ 28ರಂದು ಐಪಿಒ ಬಿಡುಗಡೆಯಾಗಲಿದ್ದು, 30ರಂದು ಮುಕ್ತಾಯವಾಗಲಿದೆ.
ಪ್ರವರ್ತಕರು ಮತ್ತು ಇತರೆ ಮಧ್ಯಸ್ಥಗಾರರಿಂದ ಆಫ್ ಫಾರ್ ಸೇಲ್‌ನಡಿ 1.1 ಕೋಟಿ ಈಕ್ವಿಟಿ ಷೇರುಗಳ ಮಾರಾಟದ ಮೂಲಕ ಇಷ್ಟು ಮೊತ್ತದ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಪ್ರತಿ ಈಕ್ವಿಟಿ ಷೇರಿಗೆ ₹304ರಿಂದ ₹321 ಬೆಲೆ ನಿಗದಿಪಡಿಸಿದೆ.
ಮಹಾರಾಷ್ಟ್ರದಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರವಾಹನ ತಯಾರಿಕಾ ಘಟಕ ಸ್ಥಾಪನೆ ಮತ್ತು ಸಾಲ ಮರುಪಾವತಿಗೆ ಈ ಬಂಡವಾಳ ಬಳಸಲು ಕಂಪನಿಯು ನಿರ್ಧರಿಸಿದೆ. ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು ₹11,956 ಕೋಟಿ ಆಗಿದೆ.
ಕನಿಷ್ಠ 46 ಈಕ್ವಿಟಿ ಷೇರುಗಳಿಗೆ ಮತ್ತು ನಂತರದ 46 ಈಕ್ವಿಟಿ ಷೇರುಗಳ ಗುಣಕದಲ್ಲಿ ಬಿಡ್‌ಗೆ ಅವಕಾಶವಿದೆ. ಪ್ರತಿ ಈಕ್ವಿಟಿ ಷೇರಿಗೆ ₹30ರಂತೆ ಉದ್ಯೋಗಿಗಳಿಗೆ ರಿಯಾಯಿತಿ ನೀಡಲಾಗಿದೆ. 1 ಲಕ್ಷ ಈಕ್ವಿಟಿ ಷೇರುಗಳು ಉದ್ಯೋಗಿಗಳಿಗೆ ಮೀಸಲಾಗಿವೆ ಎಂದು ತಿಳಿಸಿದೆ.
ಈಗಾಗಲೇ, ಸಾಂಸ್ಥಿಕ ಹೂಡಿಕೆದಾರರ ಬಿಡ್ ಆರಂಭವಾಗಿದೆ. ಸಾಂಸ್ಥಿಕ ಹೂಡಿಕೆದಾರರ ಭಾಗದಲ್ಲಿ ಕಡಿಮೆ ಚಂದಾದಾರಿಕೆ ಅಥವಾ ಹಂಚಿಕೆಯಾಗದ ಸಂದರ್ಭದಲ್ಲಿ ಉಳಿದ ಈಕ್ವಿಟಿ ಷೇರುಗಳನ್ನು ನಿವ್ವಳ ಕ್ಯುಐಬಿ (ಅರ್ಹ ಸಾಂಸ್ಥಿಕ ಹೂಡಿಕೆದಾರರು) ಭಾಗಕ್ಕೆ ಸೇರಿಸಲಾಗುತ್ತದೆ ಎಂದು ತಿಳಿಸಿದೆ.
ಅಲ್ಲದೆ, ನಿವ್ವಳ ಕ್ಯುಐಬಿ ಭಾಗದ ಶೇ 5ರಷ್ಟು ಮ್ಯೂಚುವಲ್ ಫಂಡ್‌ಗಳಿಗೆ ಮಾತ್ರ ಅನುಪಾತದ ಆಧಾರದ ಮೇಲೆ ಹಂಚಿಕೆಗೆ ಲಭ್ಯ ಇರಲಿದೆ. ಉಳಿದ ನಿವ್ವಳ ಕ್ಯುಐಬಿ ಪಾಲು ಮ್ಯೂಚುವಲ್ ಫಂಡ್‌ಗಳು ಸೇರಿ ಎಲ್ಲಾ ಕ್ಯುಐಬಿ ಬಿಡ್ಡರ್‌ಗಳಿಗೆ (ಸಾಂಸ್ಥಿಕ ಹೂಡಿಕೆದಾರರನ್ನು ಹೊರತುಪಡಿಸಿ) ಅನುಪಾತ ಆಧಾರದ ಮೇಲೆ ಹಂಚಿಕೆಗೆ ಲಭ್ಯವಿರಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.