ADVERTISEMENT

ವಾಹನ ಮಾರಾಟ ಭಾರಿ ಕುಸಿತ

ಆರ್ಥಿಕ ಹಿಂಜರಿತ ಪರಿಣಾಮ: ಆಗಸ್ಟ್‌ನಲ್ಲಿಯೂ ಮುಂದುವರಿದ ಸಮಸ್ಯೆ

ಪಿಟಿಐ
Published 9 ಸೆಪ್ಟೆಂಬರ್ 2019, 19:46 IST
Last Updated 9 ಸೆಪ್ಟೆಂಬರ್ 2019, 19:46 IST
   

ನವದೆಹಲಿ: ಆರ್ಥಿಕ ಹಿಂಜರಿತದ ಬಿಕ್ಕಟ್ಟು ವಾಹನ ಉದ್ಯಮದ ಮೇಲೆ ತನ್ನ ನಕಾರಾತ್ಮಕ ಪ್ರಭಾವವನ್ನು ಮುಂದುವರಿಸಿದೆ. ಆಗಸ್ಟ್‌ ತಿಂಗಳ ವಾಹನ ಮಾರಾಟವೂ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.ಪ್ರಯಾಣಿಕ ವಾಹನ, ವಾಣಿಜ್ಯ ವಾಹನ, ದ್ವಿಚಕ್ರವಾಹನ ಹೀಗೆ ಎಲ್ಲಾ ವಿಭಾಗಗಳೂ ಸಂಕಷ್ಟಕ್ಕೆ ಸಿಲುಕಿವೆ.

ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟವು (ಎಸ್‌ಐಎಎಂ) 1997–98ರಿಂದ ವಾಹನ ಮಾರಾಟದ ಅಂಕಿ–ಅಂಶಗಳನ್ನು ಸಂಗ್ರಹಿಸಲು ಆರಂಭಿಸಿದ ಬಳಿಕ ಒಂದು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಮಾರಾಟದ ಅತ್ಯಂತ ಗರಿಷ್ಠ ಕುಸಿತ ಇದಾಗಿದೆ.

ಜುಲೈನಲ್ಲಿ ಒಟ್ಟಾರೆ ವಾಹನ ಮಾರಾಟವು 19 ವರ್ಷಗಳ ಕನಿಷ್ಠ ಮಟ್ಟವಾದ ಶೇ 18.71ಕ್ಕೆ ಇಳಿಕೆಯಾಗಿತ್ತು.

ADVERTISEMENT

ಇದೀಗ ಆಗಸ್ಟ್‌ನಲ್ಲಿ ಒಟ್ಟಾರೆ ಮಾರಾಟ ಶೇ 23.55ರಷ್ಟು ಗರಿಷ್ಠ ಇಳಿಕೆ ಕಂಡಿದೆ.2019ರ ಜುಲೈನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 30.98ರಷ್ಟು ಇಳಿಕೆಯಾಗಿತ್ತು. ಆಗಸ್ಟ್‌ನಲ್ಲಿ ಶೇ 31.57ರಷ್ಟು ಕುಸಿತ ಕಂಡಿದೆ.

ರಿಟೇಲ್‌ ಮಾರಾಟವೂ ಇಳಿಕೆ: ವಾಹನಗಳ ರಿಟೇಲ್‌ ಮಾರಾಟವೂ ಶೇ 4.15ರಷ್ಟು ಇಳಿಕೆಯಾಗಿದ್ದು, 16,00,376 ವಾಹನಗಳು ಮಾರಾಟವಾಗಿವೆ.

ಪ್ರಯಾಣಿಕ ವಾಹನ ಮಾರಾಟದಲ್ಲಿ ಶೇ 7.13ರಷ್ಟು ಕಡಿಮೆಯಾಗಿದೆ.ದ್ವಿಚಕ್ರವಾಹನದ ಮಾರಾಟ ಶೇ 3.4ರಷ್ಟು ಇಳಿದಿದೆ.

ಅಶೋಕ್‌ ಲೇಲ್ಯಾಂಡ್ ತಯಾರಿಕೆ ಸ್ಥಗಿತ
ಚೆನ್ನೈ (ಪಿಟಿಐ): ವಾಣಿಜ್ಯ ವಾಹನ ತಯಾರಿಸುವ ಪ್ರಮುಖ ಕಂಪನಿಅಶೋಕ್‌ ಲೇಲ್ಯಾಂಡ್‌, ಸೆಪ್ಟೆಂಬರ್‌ನಲ್ಲಿ ತನ್ನ ವಿವಿಧ ಘಟಕಗಳಲ್ಲಿ ತಯಾರಿಕೆಯನ್ನು ಕೆಲ ಮಟ್ಟಿಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ವಾಹನ ಮಾರಾಟ ನಿರಂತರವಾಗಿ ಕುಸಿಯುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಟಾಟಾ ಮೋಟರ್ಸ್‌ ಮತ್ತು ಮಹೀಂದ್ರಾ, ಟಿವಿಎಸ್‌ನ ಸುಂದರಂ ಕ್ಲೇಟಾನ್‌, ಮಾರುತಿ ಸುಜುಕಿ, ಹೀರೊ ಮೋಟೊ ಕಾರ್ಪ್‌ ಕಂಪನಿಗಳು ಸಹ ತಯಾರಿಕೆಯನ್ನು ಕಡಿಮೆ ಮಾಡಿ, ಪೂರೈಕೆ–ಬೇಡಿಕೆ ಹೊಂದಾಣಿಕೆ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.