ನವದೆಹಲಿ: ಬೆಂಗಳೂರಿನ ಬಾಗಲೂರಲ್ಲಿ 2020ರ ಬಳಿಕ ಮನೆಗಳ ಸರಾಸರಿ ಬೆಲೆಯಲ್ಲಿ ಶೇ 90ರಷ್ಟು ಹೆಚ್ಚಳವಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಅನರಾಕ್ ಹೇಳಿದೆ.
ಕಳೆದ ಐದು ವರ್ಷಗಳಲ್ಲಿ ಮನೆಗಳ ಬೆಲೆ ಏರಿಕೆ ವಿಚಾರದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ಸರ್ಜಾಪುರ ರಸ್ತೆ ಕ್ರಮವಾಗಿ ಮೂರು ಮತ್ತು ಐದನೇ ಸ್ಥಾನಗಳಲ್ಲಿವೆ. ಅನರಾಕ್ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದ ಏಳು ಪ್ರಮುಖ ನಗರಗಳನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡಿತ್ತು.
‘ಬಾಗಲೂರಲ್ಲಿ 2019ರ ಕೊನೆಯಲ್ಲಿ ಮನೆಗಳ ಸರಾಸರಿ ಬೆಲೆ ಚದರ ಅಡಿಗೆ ₹4,300 ಇತ್ತು. ಈ ವರ್ಷದ ಜೂನ್ ಅಂತ್ಯದ ವೇಳೆಗೆ ಪ್ರತಿ ಚದರ ಅಡಿಗೆ ಸರಾಸರಿ ಬೆಲೆ ₹8,151ಕ್ಕೆ ಏರಿದೆ’ ಎಂದು ಅನರಾಕ್ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.
ವೈಟ್‌ಫೀಲ್ಡ್ ಮತ್ತು ಸರ್ಜಾಪುರ ರಸ್ತೆಯಲ್ಲಿ ಇದೇ ಅವಧಿಯಲ್ಲಿ ಮನೆಗಳ ಸರಾಸರಿ ಬೆಲೆಯಲ್ಲಿ ಕ್ರಮವಾಗಿ ಶೇ 80 ಹಾಗೂ ಶೇ 58ರಷ್ಟು ಹೆಚ್ಚಳವಾಗಿದೆ.
ಬೆಂಗಳೂರಿನ ರಿಯಲ್ ಎಸ್ಟೇಟ್ ಪ್ರಗತಿಯ ಕುರಿತು ಪ್ರತಿಕ್ರಿಯಿಸಿದ ಬಿಸಿಡಿ ಸಮೂಹದ ಸಿಎಂಡಿ ಅಂಗದ್ ಬೇಡಿ, ‘ಉತ್ತರ ಬೆಂಗಳೂರು, ವೈಟ್‌ಫೀಲ್ಡ್ ಮತ್ತು ಸರ್ಜಾಪುರ ರಸ್ತೆಯಲ್ಲಿ ಮನೆಗಳ ಬೆಲೆಯಲ್ಲಿ ಗಣನೀಯ ಏರಿಕೆಗೆ ಈ ಭಾಗಗಳಲ್ಲಿ ಮೂಲಸೌಕರ್ಯಗಳ ತ್ವರಿತ ಅಭಿವೃದ್ಧಿಯೇ ಕಾರಣ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.