ನವದೆಹಲಿ: ಸರ್ಕಾರಿ ಸ್ವಾಮ್ಯದ ಯುಕೊ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಸುಬೋಧ್ ಕುಮಾರ್ ಗೋಯಲ್ ಅವರನ್ನು ₹6,200 ಕೋಟಿಗೂ ಹೆಚ್ಚು ಹಣದ ಅಕ್ರಮ ವರ್ಗಾವಣೆ ಆರೋಪದಡಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ತಿಳಿಸಿದೆ.
ಕಾನ್‌ಕಾಸ್ಟ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ (ಸಿಎಸ್‌ಪಿಎಲ್) ಮತ್ತು ಇತರರ ವಿರುದ್ಧ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಗೋಯಲ್ ಅವರನ್ನು 16ರಂದು ಇಲ್ಲಿನ ಅವರ ನಿವಾಸದಲ್ಲಿ ಬಂಧಿಸಲಾಯಿತು. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಕುರಿತ ಕೋಲ್ಕತ್ತದ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಮೇ 17ರಂದು ಹಾಜರುಪಡಿಸಲಾಯಿತು. ನ್ಯಾಯಾಲಯವು ಮೇ 21ರ ವರೆಗೆ ಇ.ಡಿ ಕಸ್ಟಡಿಗೆ ನೀಡಿದೆ ಎಂದು ತಿಳಿಸಿದೆ.
ಏಪ್ರಿಲ್ ತಿಂಗಳಲ್ಲಿ ಗೋಯಲ್ ಮತ್ತು ಇತರರ ನಿವಾಸದ ಮೇಲೆ ಈ ತನಿಖೆಯ ಭಾಗವಾಗಿ ಇ.ಡಿ ದಾಳಿ ನಡೆಸಿತ್ತು.
ಪ್ರಕರಣವೇನು?: ಸುಬೋಧ್ ಕುಮಾರ್ ಅವರು ಯುಕೊ ಬ್ಯಾಂಕ್‌ನ ಸಿಎಂಡಿ ಆಗಿದ್ದ ವೇಳೆ ಕಾನ್‌ಕಾಸ್ಟ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್‌ಗೆ ₹6,210 ಕೋಟಿ ಮೊತ್ತದ ಸಾಲವನ್ನು ಮಂಜೂರು ಮಾಡಿದ್ದರು. ಈ ಹಣವನ್ನು ಕಂಪನಿಯು ಬೇರೆಡೆ ವರ್ಗಾವಣೆ ಮಾಡಿದೆ. ಇದಕ್ಕಾಗಿ ಗೋಯಲ್ ಕಂಪನಿಯಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ತಿಳಿಸಿತ್ತು. ತನಿಖೆ ವೇಳೆ ಗೋಯಲ್ ನಗದು, ಸ್ಥಿರಾಸ್ತಿ, ಐಷಾರಾಮಿ ವಸ್ತುಗಳನ್ನು ಶೆಲ್ ಕಂಪನಿಗಳು, ನಕಲಿ ವ್ಯಕ್ತಿಗಳು ಮತ್ತು ಕುಟುಂಬ ಸದಸ್ಯರಿಂದ ಪಡೆದುಕೊಂಡಿದ್ದಾರೆ ಎನ್ನುವುದು ಬಯಲಾಗಿತ್ತು.
ಈ ಶೆಲ್ ಕಂಪನಿಗಳು ಗೋಯಲ್ ಮತ್ತು ಅವರ ಕುಟುಂಬ ಸದಸ್ಯರ ಮಾಲೀಕತ್ವ ಅಥವಾ ನಿಯಂತ್ರಣದಲ್ಲಿವೆ. ಇವುಗಳ ಮೂಲಕ ಪಡೆದುಕೊಂಡಿರುವ ಹಲವಾರು ಆಸ್ತಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.