ADVERTISEMENT

ಎಂಎಸ್‌ಎಂಇಗೆ ಬ್ಯಾಂಕ್‌ ಆಫ್‌ ಬರೋಡಾ ಸಾಲ

ಸಾಲ ಖಾತರಿ ಯೋಜನೆಯಡಿ ನೆರವು: ಬ್ಯಾಂಕ್‌ ಆಫ್‌ ಬರೋಡಾ

ಪಿಟಿಐ
Published 23 ಮೇ 2020, 19:54 IST
Last Updated 23 ಮೇ 2020, 19:54 IST
ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಬರೋಡಾ   

ಮುಂಬೈ: ಕೇಂದ್ರ ಸರ್ಕಾರ ಘೋಷಿಸಿರುವ ತುರ್ತು ಸಾಲ ಖಾತರಿ ಯೋಜನೆಯಡಿ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳಿಗೆ ₹12 ಸಾವಿರ ಕೋಟಿಯವರೆಗೆ ಸಾಲ ನೀಡುವುದಾಗಿಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಹೇಳಿದೆ.

‘ಬಂಡವಾಳ ಪಟ್ಟಿಯಲ್ಲಿ ಒಟ್ಟಾರೆ ₹ 58 ಸಾವಿರ ಕೋಟಿ ಇದ್ದು, ಅದರಲ್ಲಿ ಶೇ 20ರಷ್ಟು ಅಂದರೆ ₹ 10 ಸಾವಿರ ಕೋಟಿಯಿಂದ ₹ 12 ಸಾವಿರ ಕೋಟಿ ಆಗಲಿದೆ. ಇದನ್ನು ಎಂಎಸ್‌ಎಂಇಗಳಿಗೆ ನೀಡಲಾಗುವುದು’ ಎಂದು ಬ್ಯಾಂಕ್‌ನ ಸಿಇಒ ಸಂಜೀವ್‌ ಛಡ್ಡಾ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಕೋವಿಡ್‌ನಿಂದ ಸಮಸ್ಯೆಗೆ ಒಳಗಾಗಿರುವ ಎಂಎಸ್‌ಎಂಇಗಳಿಗೆ ₹ 3 ಲಕ್ಷ ಕೋಟಿ ಮೌಲ್ಯದ ಶೇ 100ರಷ್ಟು ಸಾಲ ಖಾತರಿ ಯೋಜನೆಯನ್ನು ಘೋಷಿಸಿದ್ದರು.

ADVERTISEMENT

ಫೆಬ್ರುವರಿ 29ರವರೆಗೆ ₹ 25 ಕೋಟಿಯವರೆಗೆ ಸಾಲ ಬಾಕಿ ಉಳಿಸಿಕೊಂಡಿರುವ ಹಾಗೂ ವಾರ್ಷಿಕ ₹ 100 ಕೋಟಿಯವರೆವಹಿವಾಟು ನಡೆಸುವ ಎಂಎಸ್‌ಎಂಇಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹವಾಗಿವೆ.

ಮಾರ್ಚ್‌ನಲ್ಲಿ ಕೋವಿಡ್‌–19 ತುರ್ತು ಸಾಲ ನಿಧಿಗೆ ಚಾಲನೆ ನೀಡಲಾಗಿದ್ದು, ಇದುವರೆಗೆ ₹ 3 ಸಾವಿರ ಕೋಟಿ ಸಾಲ ವಿತರಿಸಲಾಗಿದೆ. ಎಂಎಸ್‌ಎಂಇಗಳಿಗೆ ₹ 1,500 ಕೋಟಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬ್ಯಾಂಕ್‌ನ ಶೇ 60–70ರಷ್ಟು ಸಾಲದಾತರು ಮೂರು ತಿಂಗಳ ಇಎಂಐ ಮುಂದೂಡಿಕೆಗೆ ಒಳಪಟ್ಟಿದ್ದಾರೆ. ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗುತ್ತಿರುವುದರಿಂದ ಇಎಂಐ ಮುಂದೂಡಿಕೆಗೆ ಒಳಗಾಗುವವರ ಸಂಖ್ಯೆಯೂ ಇಳಿಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯದ ಮಟ್ಟಿಗೆ ಬ್ಯಾಂಕ್‌ನ ಬಂಡವಾಳ ಸ್ಥಿತಿ ಉತ್ತಮವಾಗಿದೆ. ಹೀಗಿದ್ದರೂ ಎರಡು ತಿಂಗಳಿನಲ್ಲಿ ಬಂಡವಾಳ ಸಂಗ್ರಹಿಸುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.