ADVERTISEMENT

ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಯುಎಫ್‌ಬಿಯು ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 15:20 IST
Last Updated 6 ನವೆಂಬರ್ 2025, 15:20 IST
   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಡೆಲ್ಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣದಿಂದ ಹಣಕಾಸಿನ ಒಳಗೊಳ್ಳುವಿಕೆಯ ಉದ್ದೇಶಕ್ಕೆ ಮತ್ತು ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ಆಗುತ್ತದೆ ಎಂಬ ಆತಂಕದಲ್ಲಿ ಹುರುಳಿಲ್ಲ’ ಎಂದು ಹೇಳಿದ್ದರು. ಈ ಹೇಳಿಕೆಗೆ ಯುಎಫ್‌ಬಿಯು ವಿರೋಧ ವ್ಯಕ್ತಪಡಿಸಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳು ದೇಶದ ಆರ್ಥಿಕ ಒಳಗೊಳ್ಳುವಿಕೆಗೆ ಬೆನ್ನಲುಬು ಆಗಿವೆ. ಈ ಬ್ಯಾಂಕ್‌ಗಳು ಜನರದ್ದು, ಲಾಭಕೋರರಿಗೆ ಸೇರಿದ್ದಲ್ಲ. ಇವು ದೇಶದ ಆಸ್ತಿ. ಅವುಗಳನ್ನು ಮಾರಾಟ ಮಾಡಲು ಬಿಡುವುದಿಲ್ಲ ಎಂದು ಯುಎಫ್‌ಬಿಯು ಹೇಳಿದೆ.

ADVERTISEMENT

ಜನಧನ್‌, ನರೇಗಾ, ಪಿಂಚಣಿ ಸೇರಿದಂತೆ ಸರ್ಕಾರದ ಯೋಜನೆಗಳ ಫಲ ದೊರೆಯುತ್ತಿರುವುದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದಲೇ ಹೊರತು ಖಾಸಗಿ ಬ್ಯಾಂಕ್‌ಗಳಿಂದ ಅಲ್ಲ. ಖಾಸಗೀಕರಣದಿಂದ ಉದ್ಯೋಗದ ಅಭದ್ರತೆ ಮತ್ತು ಸಾರ್ವಜನಿಕರ ಹಣಕ್ಕೆ ಅಪಾಯ ಉಂಟಾಗಲಿದೆ. ಖಾಸಗೀಕರಣದಿಂದ ಕಾರ್ಪೊರೇಟ್‌ ಕಂಪನಿಗಳಿಗೆ ಲಾಭವಾಗಲಿದೆಯೇ ಹೊರತು ಸಾರ್ವಜನಿಕರಿಗೆ ಅಲ್ಲ. ಖಾಸಗೀಕರಣದಿಂದ ಜನರ ಹಣ ಖಾಸಗಿಯವರ ನಿಯಂತ್ರಣಕ್ಕೆ ಸೇರಲಿದೆ ಎಂದು ಹೇಳಿದೆ.

ಸರ್ಕಾರವು ತನ್ನ ಅಧೀನದ ಬ್ಯಾಂಕ್‌ಗಳಿಗೆ ಹಣಕಾಸಿನ ನೆರವು ನೀಡಬೇಕು, ಆಧುನಿಕ ತಂತ್ರಜ್ಞಾನ ಮತ್ತು ಪಾರದರ್ಶಕ ಆಡಳಿತ ಇರುವಂತೆ ನೋಡಿಕೊಳ್ಳಬೇಕು. ಜನರ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಾರ್ವಜನಿಕರ ಜೊತೆ ಸಮಾಲೋಚನೆ ಮತ್ತು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ಅದು ಸರ್ಕಾರವನ್ನು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.