ನವದೆಹಲಿ: ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ರಕ್ಷಣೆ ಖಾತರಿಪಡಿಸಬೇಕು, ಬ್ಯಾಂಕಿಂಗ್ ಸೇವೆಗಳು ಸಾರ್ವಜನಿಕರಿಗೆ ಅಡಚಣೆ ಇಲ್ಲದೆ ಲಭ್ಯವಾಗುವಂತೆ ಮಾಡಬೇಕು ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ. ನಾಗರಾಜು ಅವರು ಎಲ್ಲ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
‘ಸಮಾಜ ವಿರೋಧಿ ಶಕ್ತಿಗಳು ಬ್ಯಾಂಕ್ ಸಿಬ್ಬಂದಿಯ ಜೊತೆ ಬ್ಯಾಂಕ್ ಆವರಣದಲ್ಲಿ ಈಚೆಗೆ ಒರಟಾಗಿ ವರ್ತಿಸಿರುವ ಆತಂಕಕಾರಿ ಘಟನೆಗಳನ್ನು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳು ತೋರಿಸಿಕೊಟ್ಟಿವೆ. ಈ ಘಟನೆಗಳ ವೇಳೆ ನಿಂದನಾತ್ಮಕ ಮಾತುಗಳು ಕೇಳಿಬಂದಿವೆ, ದೈಹಿಕ ಹಲ್ಲೆ ಆಗಿದೆ ಮತ್ತು ಕೆಲಸಗಳಿಗೆ ಅಡ್ಡಿ ಉಂಟುಮಾಡುವುದು ಕೂಡ ನಡೆದಿದೆ’ ಎಂದು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.
ಇವೆಲ್ಲ ಕಾನೂನುಬಾಹಿರವಾದ ಕೃತ್ಯಗಳು, ಇವು ಬ್ಯಾಂಕ್ ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನು ಕುಂದಿಸುತ್ತವೆ ಎಂದು ಅವರು ಹೇಳಿದ್ದಾರೆ. ‘ಇಂತಹ ಕೃತ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು, ಬ್ಯಾಂಕ್ ಸಿಬ್ಬಂದಿಗೆ ರಕ್ಷಣೆ ನೀಡುವ ದಿಸೆಯಲ್ಲಿ ಹಾಗೂ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆಗಳು ಯಾವುದೇ ಅಡ್ಡಿ ಇಲ್ಲದೆ ಲಭ್ಯವಾಗುವಂತೆ ಮಾಡಲು ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನಾಗರಾಜು ಅವರು ಸೂಚಿಸಿದ್ದಾರೆ.
ಈ ಕ್ರಮಗಳನ್ನು ಕೈಗೊಂಡರೆ ಸಾರ್ವಜನಿಕರು ಇರಿಸಿರುವ ವಿಶ್ವಾಸವು ಹೆಚ್ಚಾಗುತ್ತದೆ, ಬ್ಯಾಂಕ್ ಸಿಬ್ಬಂದಿ ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತೆ ಮೂಡುತ್ತದೆ, ಬ್ಯಾಂಕಿಂಗ್ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವುದಕ್ಕೆ ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬ್ಯಾಂಕ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಯುವುದು ಹೆಚ್ಚಾಗುತ್ತಿದೆ ಎಂದು ಹೇಳಿದ್ದ ಬ್ಯಾಂಕ್ ಕಾರ್ಮಿಕರ ಒಕ್ಕೂಟಗಳು, ಶಾಖೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಹಿರಿಯ ಅಧಿಕಾರಿಗಳನ್ನು ಕೋರಿದ್ದವು. ಕೆಲವು ಪ್ರಕರಣಗಳಲ್ಲಿ ಬ್ಯಾಂಕ್‌ನ ಮಹಿಳಾ ಸಿಬ್ಬಂದಿ ಕೂಡ ಗ್ರಾಹಕರಿಂದ ಕಿರುಕುಳಕ್ಕೆ ತುತ್ತಾಗಿದ್ದರು ಎನ್ನಲಾಗಿದೆ.
ರಾಜ್ಯಗಳಿಗೆ ಸೂಚನೆ
* ಬ್ಯಾಂಕ್ ಶಾಖೆಗಳಲ್ಲಿ ಇಂತಹ ಘಟನೆಗಳು ನಡೆಯುವುದನ್ನು ತಡೆಯಲು ಸ್ಥಳೀಯ ಪೊಲೀಸರನ್ನು ನಿಯೋಜಿಸುವುದು, ವಹಿವಾಟು ಹೆಚ್ಚಿರುವ ಸಂದರ್ಭದಲ್ಲಿ ಗಸ್ತು ನಡೆಸುವುದು ಸೇರಿದಂತೆ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು.
* ಇಂತಹ ಘಟನೆಗಳ ಬಗ್ಗೆ ದೂರು ಬಂದಾಗ ಸಂಬಂಧಪಟ್ಟ ಕಾನೂನು ಜಾರಿ ಸಂಸ್ಥೆಗಳಿಂದ ಪರಿಣಾಮಕಾರಿ ಪ್ರತಿಕ್ರಿಯೆ ಇರುವಂತೆ ನೋಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.