ಬಿಯರ್
ನವದೆಹಲಿ: ಅಲ್ಯೂಮಿನಿಯಂ ಕ್ಯಾನ್‌ಗಳ ತೀವ್ರ ಕೊರತೆಯನ್ನು ಎದುರಿಸುತ್ತಿರುವ ದೇಶಿ ಬಿಯರ್ ಉದ್ಯಮವು ಅಲ್ಪ ಅವಧಿಗೆ ನಿಯಮ ಸಡಿಲಿಸಿ, ವಿದೇಶಗಳಿಂದ ಅಲ್ಯೂಮಿನಿಯಂ ಆಮದು ಅಡ್ಡಿಗಳಿಲ್ಲದೆ ಆಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಅಲ್ಯೂಮಿನಿಯಂ ಕೊರತೆಯು ಬಿಯರ್ ಉದ್ಯಮದ ಬೆಳವಣಿಗೆಗೆ ತೊಂದರೆ ಉಂಟುಮಾಡಬಹುದು ಎಂಬ ಭೀತಿಯು ಉದ್ಯಮದ ಪ್ರಮುಖರಿಗೆ ಎದುರಾಗಿದೆ.
500 ಮಿ.ಲೀ. ಸಾಮರ್ಥ್ಯದ ಅಲ್ಯೂಮಿನಿಯಂ ಕ್ಯಾನ್‌ಗಳ ಕೊರತೆಯು ಬಿಯರ್ ಉದ್ಯಮಕ್ಕೆ ವಾರ್ಷಿಕ 12 ಕೋಟಿಯಿಂದ 13 ಕೋಟಿಯಷ್ಟು ಇದೆ. ವಾರ್ಷಿಕ ಬಿಯರ್ ಮಾರಾಟದಲ್ಲಿ ಶೇ 20ರಷ್ಟು ಇಷ್ಟು ಕ್ಯಾನ್‌ಗಳ ಮೂಲಕ ಆಗುತ್ತದೆ. ಅಲ್ಲದೆ, ಅಲ್ಯೂಮಿನಿಯಂ ಕೊರತೆಯಿಂದಾಗಿ ಸರ್ಕಾರಗಳ ವರಮಾನದಲ್ಲಿ ₹1,300 ಕೋಟಿಯಷ್ಟು ಕೊರತೆ ಎದುರಾಗಬಹುದು ಎಂದು ಬ್ರೀವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಅಂದಾಜಿಸಿದೆ.
2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಅಲ್ಯೂಮಿನಿಯಂ ಕ್ಯಾನ್‌ಗಳಿಗೆ ಕಡ್ಡಾಯವಾಗಿ ಬಿಐಎಸ್ (ಭಾರತೀಯ ಮಾನಕ ಬ್ಯೂರೊ) ಪ್ರಮಾಣಪತ್ರ ಪಡೆಯಬೇಕಿದೆ. ಹೀಗಾಗಿ ಬಿಯರ್ ಮತ್ತು ಇತರ ಪೇಯಗಳ ಉದ್ಯಮಕ್ಕೆ ಅಲ್ಪಾವಧಿಗೆ ಅಲ್ಯೂಮಿನಿಯಂ ಕ್ಯಾನ್‌ಗಳ ಕೊರತೆ ಎದುರಾಗಿದೆ.
ಪೇಯಗಳನ್ನು ತುಂಬಿಸುವ ಅಲ್ಯೂಮಿನಿಯಂ ಕ್ಯಾನ್‌ಗಳನ್ನು ಪೂರೈಕೆ ಮಾಡುವ ಪ್ರಮುಖ ಎರಡು ಕಂಪನಿಗಳು ಮಂದಿನ ಆರರಿಂದ 12 ತಿಂಗಳವರೆಗೆ ಪೂರೈಕೆ ಹೆಚ್ಚಿಸಲು ತಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ತಿಳಿಸಿವೆ.
ಗುಣಮಟ್ಟದ ವಿಚಾರವಾಗಿ ನಿಯಮ ಬಿಗಿಗೊಳಿಸಿರುವ ಪರಿಣಾಮವಾಗಿ ಬಿಯರ್ ಉದ್ಯಮವು ಕ್ಯಾನ್‌ಗಳನ್ನು ವಿದೇಶಗಳಿಂದ ತರಿಸಿಕೊಳ್ಳುವುದಕ್ಕೆ ಹಲವು ತಿಂಗಳು ಬೇಕಾಗುತ್ತದೆ. ಹೀಗಾಗಿ ನಿಯಮವನ್ನು ಒಂದು ವರ್ಷದ ಮಟ್ಟಿಗೆ ತುಸು ಸಡಿಲಗೊಳಿಸುವಂತೆ ಕೋರಿ ಬಿಎಐ ಸರ್ಕಾರದ ಕದ ತಟ್ಟಿದೆ.
ಒಂದು ವರ್ಷದ ಮಟ್ಟಿಗೆ ವಿನಾಯಿತಿ ದೊರೆತರೆ ಸ್ಥಳೀಯ ಪೂರೈಕೆದಾರರಿಗೆ ಕ್ಯಾನ್ ತಯಾರಿಕೆಯನ್ನು ಹೆಚ್ಚು ಮಾಡಲು ಆಗುತ್ತದೆ ಎಂಬುದು ಉದ್ಯಮದ ವಾದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.