ADVERTISEMENT

ಷೇರುಪೇಟೆ: ಸೆನ್ಸೆಕ್ಸ್‌ 620 ಅಂಶ ಜಿಗಿತ

ಪಿಟಿಐ
Published 1 ಡಿಸೆಂಬರ್ 2021, 19:30 IST
Last Updated 1 ಡಿಸೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬ್ಯಾಂಕಿಂಗ್‌, ಹಣಕಾಸು ಮತ್ತು ಇಂಧನ ವಲಯದ ಷೇರುಗಳಲ್ಲಿ ಉತ್ತಮ ವಹಿವಾಟು ನಡೆದಿದ್ದರಿಂದ ದೇಶದ ಷೇರುಪೇಟೆಗಳ ಸೂಚ್ಯಂಕಗಳು ಬುಧವಾರ ಏರಿಕೆ ಹಾದಿಗೆ ಮರಳಿದವು.

ರೂಪಾಯಿ ಮೌಲ್ಯ ವೃದ್ಧಿಯ ಜೊತೆಗೆ ಜಿಎಸ್‌ಟಿ ವರಮಾನ ಸಂಗ್ರಹ ಹೆಚ್ಚಳ, ತಯಾರಿಕಾ ವಲಯದ ಉತ್ತಮ ಬೆಳವಣಿಗೆಯ ಅಂಕಿ–ಅಂಶಗಳು ದೇಶಿ ಹೂಡಿಕೆದಾರರನ್ನು ಉತ್ಸಾಹದಿಂದ ವಹಿವಾಟು ನಡೆಸುವಂತೆ ಮಾಡಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 620 ಅಂಶ ಜಿಗಿತ ಕಂಡು 57,685 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 183 ಅಂಶ ಹೆಚ್ಚಾಗಿ 17,166 ಅಂಶಗಳಿಗೆ ಏರಿಕೆ ಕಂಡಿತು.

ADVERTISEMENT

ದಿನದ ವಹಿವಾಟಿನಲ್ಲಿ ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಮೌಲ್ಯ ಶೇ 5.73ರಷ್ಟು ಗರಿಷ್ಠ ಏರಿಕೆ ಕಂಡಿತು. ಆ್ಯಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ, ಟೆಕ್‌ ಮಹೀಂದ್ರ, ಮಾರುತಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಮೌಲ್ಯವೂ ಹೆಚ್ಚಾಗಿದೆ.

ಜಾಗತಿಕ ಷೇರುಪೇಟೆಗಳ ವಹಿವಾಟು ಚೇತರಿಕೆಯ ಜೊತೆಗೆ ಜಿಡಿಪಿ ಬೆಳವಣಿಗೆ ಹೆಚ್ಚಳ ಆಗಿರುವುದು ದೇಶಿ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ರೂಪಾಯಿ ಮೌಲ್ಯ ಹೆಚ್ಚಳ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 22 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 74.91ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.