ADVERTISEMENT

ಸುರಕ್ಷಿತ ಬಿಲ್‌ ಪಾವತಿಗೆ ಭಾರತ್‍ಬಿಲ್‌ಪೇ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:15 IST
Last Updated 9 ನವೆಂಬರ್ 2018, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಭಾರತದ ರಾಷ್ಟ್ರೀಯ ಪಾವತಿಗಳ ನಿಗಮವು (ಎನ್‍ಪಿಸಿಐ) ಆರಂಭಿಸಿರುವ ಭಾರತ್‍ಬಿಲ್‍ಪೇ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯುಎಸ್‍ಎಸ್‍ಬಿ) ಸೌಲಭ್ಯ ಕಲ್ಪಿಸುವ ಮೂಲಕ ಗ್ರಾಹಕರು ಸುರಕ್ಷಿತ ಮತ್ತು ಸರಳವಾಗಿ ಬಿಲ್ ಪಾವತಿ ಮಾಡುವಂತೆ ಮಾಡಿದೆ.

ದೇಶದಾದ್ಯಂತ 24 ಲಕ್ಷ ಮಳಿಗೆಗಳನ್ನು ಹೊಂದಿದ 107 ಸಂಸ್ಥೆಗಳಿಗೆ ಈ ಸೌಲಭ್ಯ ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ 30 ಸಾವಿರ ಏಜೆಂಟರು ಇದನ್ನು ಅಳವಡಿಸಿಕೊಂಡಿದ್ದು, ಒಂದು ಕೋಟಿ ಗ್ರಾಹಕರು ಈ ಸೌಲಭ್ಯ ಪಡೆಯಲು ಸಾಧ್ಯವಾಗಿದೆ.

ರಾಜ್ಯದಲ್ಲಿ ಭಾರತ್‍ಬಿಲ್ ಪೇ ವ್ಯವಸ್ಥೆಯಡಿ ಬೆಸ್ಕಾಂ ಮತ್ತು ಬಿಡಬ್ಲ್ಯುಎಸ್‍ಎಸ್‍ಬಿ ಹೊರತಾಗಿ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಚೆಸ್ಕಾಂ) ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಸೇರಿವೆ. ಇವುಗಳ ಜತೆಗೆ ದೂರಸಂಪರ್ಕ ಸೇವಾ ಸಂಸ್ಥೆಗಳಾದ ಏರ್‍ಟೆಲ್, ವೊಡಾಫೋನ್, ಐಡಿಯಾ, ಜಿಯೊ, ಬಿಎಸ್‍ಎನ್‍ಎಲ್-ಪೋಸ್ಟ್‌ಪೇಯ್ಡ್, ಟಾಟಾ ಸ್ಕೈ, ಡಿಷ್‌ ಟಿವಿ, ಸನ್ ಡೈರೆಕ್ಟ್-ಡಿಟಿಎಚ್ ಸೇರಿವೆ.

ADVERTISEMENT

‘ಒಂದೇ ವ್ಯವಸ್ಥೆಯಡಿ ಎಲ್ಲ ಬಗೆಯ ಸೇವೆಗಳ ಬಿಲ್ ಪಾವತಿಗೆ ಅವಕಾಶ ಮಾಡಿಕೊಡುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಎನ್‍ಸಿಪಿಐ ಭಾರತ್ ಬಿಲ್ ಪೇಮೆಂಟ್ ಸಿಸ್ಟಂನ ಮುಖ್ಯ ಯೋಜನಾ ಅಧಿಕಾರಿ ಎ.ಆರ್.ರಮೇಶ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಭಾರತ್‍ಬಿಲ್‍ಪೇ ಸೌಲಭ್ಯದಿಂದಾಗಿ ಬೆಸ್ಕಾಂ ಗ್ರಾಹಕರು ಬಿಲ್ ಪಾವತಿಗೆ ಅನುಕೂಲಕರ, ಸುರಕ್ಷಿತ ಸೌಲಭ್ಯ ಪಡೆದಂತಾಗಿದೆ. ಗ್ರಾಹಕರು, ಬಿಲ್ ಸ್ವೀಕರಣಾ ಕೇಂದ್ರಗಳಿಗೆ ತೆರಳದೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸುಲಭವಾಗಿ ಬಿಲ್ ಪಾವತಿಸಲು ಇದರಿಂದ ಸಾಧ್ಯವಾಗಿದೆ’ ಎಂದು ‘ಬೆಸ್ಕಾಂ’ನ ಮುಖ್ಯ ಹಣಕಾಸು ಅಧಿಕಾರಿ ಡಾ.ಆರ್.ಸಿ.ಚೇತನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.