ಬೆಂಗಳೂರು: ದೇಶದ ಪ್ರಮುಖ ಎಲೆಕ್ಟ್ರಿಕ್ ಬಸ್ ತಯಾರಿಕಾ ಕಂಪನಿ ಒಲೆಕ್ಟ್ರಾ ಗ್ರೀನ್ ಟೆಕ್ (ಒಜಿಎಲ್) ಸುಸ್ಥಿರ ಪರಿಹಾರಗಳ ಮೇಲೆ ಗಮನ ಕೇಂದ್ರೀಕರಿಸಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ– 2025ರಲ್ಲಿ ಕಂಪನಿಯು ತನ್ನ ಆವಿಷ್ಕಾರಗಳನ್ನು ಪ್ರದರ್ಶಿಸಿದೆ.
ಬ್ಲೇಡ್ ಬ್ಯಾಟರಿ ಚಾಸಿಸ್, ಮರುವಿನ್ಯಾಸಗೊಳಿಸಿದ 12 ಮೀಟರ್ ಬ್ಲೇಡ್ ಬ್ಯಾಟರಿ ಪ್ಲಾಟ್ ಫಾರ್ಮ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಿರುವ 9 ಮೀಟರ್ ಸಿಟಿ ಮತ್ತು 12 ಮೀಟರ್ ಕೋಚ್ ಬಸ್‌ಗಳು ಸೇರಿದಂತೆ ಒಲೆಕ್ಟ್ರಾ ತನ್ನ ಇತ್ತೀಚಿನ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಪ್ರಸ್ತುತಪಡಿಸಿದೆ. ಈ ಉತ್ಪನ್ನಗಳು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಆಯ್ಕೆಗಳನ್ನು ಒದಗಿಸುವ ಒಲೆಕ್ಟ್ರಾದ ಬದ್ಧತೆಗೆ ಕನ್ನಡಿ ಹಿಡಿದಿವೆ.
ಬ್ಲೇಡ್ ಬ್ಯಾಟರಿ ತಂತ್ರಜ್ಞಾನ: ಒಲೆಕ್ಟ್ರಾದ ಆವಿಷ್ಕಾರಗಳಲ್ಲಿ ಬಿವೈಡಿ ಅಭಿವೃದ್ಧಿಪಡಿಸಿದ ಬ್ಲೇಡ್ ಬ್ಯಾಟರಿ ಪ್ರಮುಖವಾಗಿದೆ. ಸುರಕ್ಷತೆ ಮತ್ತು ಕಾರ್ಯಕ್ಷಮತೆಗೆ ಹೆಸರುವಾಸಿಯಾದ ಈ ಬ್ಯಾಟರಿಯು ಬೆಂಕಿ ಅಥವಾ ಸ್ಫೋಟಕ್ಕೆ ಅಸ್ಪದ ಇಲ್ಲದಂತೆ ವಿವಿಧ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ ಎಂದು ಕಂಪನಿಯು ತಿಳಿಸಿದೆ.
ಬ್ಲೇಡ್ ಬ್ಯಾಟರಿಯು ಶೇ 30ಕ್ಕೂ ಹೆಚ್ಚಿನ ಶಕ್ತಿ ಒದಗಿಸುತ್ತದೆ. ಈ ಬಸ್‌ಗಳು ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋ ಮೀಟರ್‌ವರೆಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದೆ.
ಪ್ರಯಾಣಿಕರಿಗೆ ಆರಾಮ ಮತ್ತು ಸುರಕ್ಷತೆ ಹೆಚ್ಚಿಸಲು ಒಲೆಕ್ಟ್ರಾ ಬಸ್‌ಗಳನ್ನು ಸುಧಾರಿತ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಪ್ಯಾನೆಲ್‌ಗಳು, ಎಲೆಕ್ಟ್ರಾನಿಕ್ ಹೈಡ್ರಾಲಿಕ್ ಪವರ್ ಸ್ಟೀರಿಂಗ್ (ಇಎಚ್‌ಪಿಎಸ್), ರಿಯಕಲ್ ಟೈಮ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ಸ್ (ವಿಟಿಎಸ್) ಮತ್ತು ರಿವರ್ಸ್ ಪಾರ್ಕ್ ಅಸಿಸ್ಟ್ ಸಿಸ್ಟಮ್ಸ್ (ಆರ್‌ಪಿಎಎಸ್) ಸೇರಿವೆ ಎಂದು ವಿವರಿಸಿದೆ.
ದೇಶದಾದ್ಯಂತ 2,200ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು (ಕಳೆದ ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ) ಕಾರ್ಯ ನಿರ್ವಹಿಸುತ್ತಿವೆ. ಈ ಬಸ್‌ಗಳು 30 ಕೋಟಿ ಕಿಲೋ ಮೀಟರ್‌ಗಿಂತಲೂ ಹೆಚ್ಚು ಪ್ರಯಾಣಿಸಿದ್ದು, ಇಂಗಾಲ ಹೊರಸೂಸುವಿಕೆಯನ್ನು 2.7 ಲಕ್ಷ ಟನ್‌ನಷ್ಟು ಕಡಿಮೆ ಮಾಡಿವೆ. ಇದು 1.24 ಕೋಟಿ ಮರಗಳನ್ನು ನೆಡುವುದಕ್ಕೆ ಸಮನಾಗಿದೆ. ಪರಿಸರ ಸಂರಕ್ಷಣೆಯತ್ತ ಒಲೆಕ್ಟ್ರಾ ದಿಟ್ಟಹೆಜ್ಜೆ ಇಟ್ಟಿದೆ ಎಂದು ತಿಳಿಸಿದೆ.
‘ಒಲೆಕ್ಟ್ರಾ ಬಸ್‌ಗಳು 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೇವಲ 6 ಎಲೆಕ್ಟ್ರಿಕ್ ಬಸ್‌ಗಳ ಆರ್ಡರ್‌ನೊಂದಿಗೆ ಆರಂಭಗೊಂಡ ನಮ್ಮ ಪಯಣವು 5,150 ಎಲೆಕ್ಟ್ರಿಕ್ ಬಸ್‌ಗಳವರೆಗೆ ಸಾಗಿದೆ’ ಎಂದು ಒಲೆಕ್ಟ್ರಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ. ಪ್ರದೀಪ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.