ADVERTISEMENT

ಮೊಬಿಲಿಟಿ ಹೂಡಿಕೆಗೆ ಭಾರತ ಪ್ರಶಸ್ತ ತಾಣ: ಪ್ರಧಾನಿ ಮೋದಿ

ಪಿಟಿಐ
Published 17 ಜನವರಿ 2025, 14:22 IST
Last Updated 17 ಜನವರಿ 2025, 14:22 IST
<div class="paragraphs"><p>ನವದೆಹಲಿಯ ಭಾರತ ಮಂಟಪದಲ್ಲಿ ಶುಕ್ರವಾರ ಭಾರತ್‌ ಮೊಬಿಲಿಟಿ ಗ್ಲೋಬಲ್‌ ಎಕ್ಸ್‌ಪೋ ಮಳಿಗೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಜರಿದ್ದರು</p></div>

ನವದೆಹಲಿಯ ಭಾರತ ಮಂಟಪದಲ್ಲಿ ಶುಕ್ರವಾರ ಭಾರತ್‌ ಮೊಬಿಲಿಟಿ ಗ್ಲೋಬಲ್‌ ಎಕ್ಸ್‌ಪೋ ಮಳಿಗೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಜರಿದ್ದರು

   

–ಪಿಟಿಐ ಚಿತ್ರ

ನವದೆಹಲಿ: ‘ದೇಶದಲ್ಲಿ ವರ್ಷಕ್ಕೆ 2.5 ಕೋಟಿ ವಾಹನಗಳು ಮಾರಾಟವಾಗುತ್ತಿವೆ. ನಾಲ್ಕು ವರ್ಷಗಳಲ್ಲಿ ಆಟೊಮೊಬೈಲ್‌ ವಲಯದಲ್ಲಿ ₹3.11 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ ಆಕರ್ಷಿಸಲಾಗಿದೆ. ಹಾಗಾಗಿ, ಭವಿಷ್ಯದಲ್ಲಿ ಈ ವಲಯದಲ್ಲಿ ಬಂಡವಾಳ ಹೂಡಿಕೆಗೆ ಭಾರತವು ಪ್ರಶಸ್ತ ತಾಣವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ADVERTISEMENT

ಭಾರತ ಮಂಟಪದಲ್ಲಿ ಶುಕ್ರವಾರ ಆರಂಭವಾದ ಭಾರತ್‌ ಮೊಬಿಲಿಟಿ ಗ್ಲೋಬಲ್‌ ಎಕ್ಸ್‌ಪೋ–2025ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಐದು ದಿನಗಳವರೆಗೆ ನಡೆಯುವ ಈ ಪ್ರದರ್ಶನದಲ್ಲಿ ವಿವಿಧ ಕಂಪನಿಗಳಿಂದ 100ಕ್ಕೂ ಹೆಚ್ಚು ಹೊಸ ವಾಹನಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ವಾಹನ ತಯಾರಕರು, ಎಲೆಕ್ಟ್ರಾನಿಕ್‌ ಬಿಡಿಭಾಗಗಳು, ಟೈರ್‌, ಬ್ಯಾಟರಿ ತಯಾರಕರು, ಆಟೊಮೋಟಿವ್‌ ಸಾಫ್ಟ್‌ವೇರ್‌ ಕಂಪನಿಗಳು ಮತ್ತು ಉಪಕರಣಗಳ ಮರುಬಳಕೆ ಮಾಡುವ ಕಂ‍‍ಪನಿಗಳು ಒಂದೇ ವೇದಿಕೆಯಲ್ಲಿ ಸೇರಲಿವೆ. 

ಸರ್ಕಾರವು ‘ಮೇಕ್‌ ಇನ್‌ ಇಂಡಿಯಾ’ಕ್ಕೆ ಒತ್ತು ನೀಡಿದೆ. ಇದು ದೇಶದ ಆಟೊಮೊಬೈಲ್‌ ವಲಯ ಅಭಿವೃದ್ಧಿಗೆ ನಿರ್ಣಾಯಕ ಪಾತ್ರವಹಿಸಲಿದೆ. ಜಾಗತಿಕ ಬೆಳವಣಿಗೆಗೂ ನೆರವಾಗಲಿದೆ. ಇದರಡಿ ₹2.25 ಲಕ್ಷ ಕೋಟಿ ಮೌಲ್ಯದ ಮಾರಾಟ ವಹಿವಾಟು ನಡೆದಿದೆ. 1.5 ಲಕ್ಷ ನೇರ ಉದ್ಯೋಗಗಗಳು ಸೃಷ್ಟಿಯಾಗಿವೆ ಎಂದರು.

ಕಳೆದ ಒಂದು ವರ್ಷದಲ್ಲಿ ದೇಶದ ಆಟೊಮೊಬೈಲ್‌ ವಲಯದ ಬೆಳವಣಿಗೆಯು ಶೇ 12ರಷ್ಟು ಬೆಳವಣಿಗೆ ಕಂಡಿದೆ. ರಫ್ತು ವಹಿವಾಟಿನಲ್ಲೂ ಏರಿಕೆಯಾಗಿದೆ ಎಂದು ತಿಳಿಸಿದರು.

ಭಾರತವು ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮೂರನೇ ಅತಿದೊಡ್ಡ ಪ್ರಯಾಣಿಕ ವಾಹನಗಳ ಮಾರುಕಟ್ಟೆಯಾಗಿದೆ ಎಂದರು.

ದೇಶದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಬಳಕೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ ಒಂದು ದಶಕದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಮಾರಾಟದಲ್ಲಿ 640 ಪಟ್ಟು ಏರಿಕೆಯಾಗಿದೆ ಎಂದು ತಿಳಿಸಿದರು.

ಕಳೆದ ಹತ್ತು ವರ್ಷದ ಹಿಂದೆ ವಾರ್ಷಿಕ 2,600 ವಿದ್ಯುತ್‌ಚಾಲಿತ ವಾಹನಗಳು ಮಾರಾಟವಾಗುತ್ತಿದ್ದವು. 2024ರಲ್ಲಿ 16.8 ಲಕ್ಷ ಇ–ವಾಹನಗಳು ಮಾರಾಟವಾಗಿವೆ. 2030ರೊಳಗೆ ಈ ವಾಹನಗಳ ಬಳಕೆ ಪ್ರಮಾಣವನ್ನು ಎಂಟು ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.