
ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಸದಸ್ಯರಿಗೆ ಏಪ್ರಿಲ್ ನಂತರದಲ್ಲಿ ತಮ್ಮ ಹಣವನ್ನು ಯುಪಿಐ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಳ್ಳುವ ಸೌಲಭ್ಯ ಸಿಗಲಿದೆ. ಇದಕ್ಕಾಗಿಯೇ ಪ್ರತ್ಯೇಕ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಪಿಎಫ್ ಖಾತೆಯಲ್ಲಿ ಇರುವ ಮೊತ್ತದಲ್ಲಿ ದೊಡ್ಡ ಭಾಗವನ್ನು ಯುಪಿಐ ವ್ಯವಸ್ಥೆಯ ಮೂಲಕ ಹಿಂಪಡೆಯುವುದು ಸಾಧ್ಯವಾಗಲಿದೆ. ಆದರೆ ಮೊತ್ತದಲ್ಲಿ ಒಂದು ಭಾಗವು ಪಿ.ಎಫ್ ಖಾತೆಯಲ್ಲಿಯೇ ಉಳಿಯಲಿದೆ. ಕೇಂದ್ರ ಕಾರ್ಮಿಕ ಸಚಿವಾಲಯದಲ್ಲಿ ಈ ಆ್ಯಪ್‌ಗೆ ಸಂಬಂಧಿಸಿದಂತೆ ಕೆಲಸಗಳು ನಡೆಯುತ್ತಿವೆ.
ಪಿ.ಎಫ್ ಖಾತೆಗೆ ಸಂಬಂಧಿಸಿದ ಪಾಸ್‌ಬುಕ್ ವಿವರಗಳನ್ನು ಕೂಡ ಈ ಆ್ಯಪ್ ಮೂಲಕವೇ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಗೊತ್ತಾಗಿದೆ. ಈಗ ಇಪಿಎಫ್‌ಒ ಸದಸ್ಯರು ಯುಎಎನ್ ಪೋರ್ಟಲ್ ಅಥವಾ ಉಮಂಗ್ ಆ್ಯಪ್ ಬಳಸಿ ಪಿ.ಎಫ್ ಖಾತೆಯ ವಿವರಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಅವುಗಳ ಮೂಲಕ ಕೆಲವು ಸೇವೆಗಳನ್ನು ಪಡೆಯುತ್ತಿದ್ದಾರೆ.
ಹೊಸ ಆ್ಯಪ್ ಬಳಕೆಗೆ ಲಭ್ಯವಾದ ನಂತರವೂ ಉಮಂಗ್ ಆ್ಯಪ್ ಮತ್ತು ಯುಎಎನ್ ಪೋರ್ಟಲ್ ಮೂಲಕ ಸೇವೆಗಳನ್ನು ಪಡೆಯಲು ಅವಕಾಶ ಇದ್ದೇ ಇರುತ್ತದೆ ಎಂದು ಮೂಲವೊಂದು ಖಚಿತಪಡಿಸಿದೆ. ಹೊಸ ಆ್ಯಪ್, ಇಪಿಎಫ್‌ಒ ಸದಸ್ಯರಿಗೆ ಸೇವೆಗಳನ್ನು ಹೆಚ್ಚು ಉತ್ತಮವಾಗಿ ನೀಡಲಿದೆ ಎನ್ನಲಾಗಿದೆ.
ಮೊಬೈಲ್ ಆ್ಯಪ್ ಬಳಸಿ ಇಪಿಎಫ್‌ಒ ಸದಸ್ಯರು ತಮ್ಮ ಖಾತೆಯಿಂದ ಹಿಂಪಡೆಯಲು ಲಭ್ಯ ಇರುವ ಮೊತ್ತ ಎಷ್ಟು ಎಂಬುದನ್ನು ಕೂಡ ಪರಿಶೀಲಿಸಬಹುದು. ಅವರು ತಮ್ಮ ವಹಿವಾಟು ಪೂರ್ಣಗೊಳಿಸಲು ಯುಪಿಐ ಪಿನ್ ಸಂಖ್ಯೆ ನಮೂದಿಸಬೇಕಾಗುತ್ತದೆ.
ಈಗ ಇಪಿಎಫ್‌ಒ ಅಧಿಕಾರಿಗಳು 100 ಖಾತೆಗಳನ್ನು ಬಳಸಿ ಈ ಹೊಸ ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದ್ದಾರೆ. ಕೇಂದ್ರ ಕಾರ್ಮಿಕ ಸಚಿವಾಲಯವು ಈ ಆ್ಯಪ್‌ಅನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.