ADVERTISEMENT

ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಶೇ 80ರಷ್ಟು ಇಳಿಕೆ: ಪೀಯೂಷ್‌

​ಪ್ರಜಾವಾಣಿ ವಾರ್ತೆ
Published 24 ಜುಲೈ 2018, 12:27 IST
Last Updated 24 ಜುಲೈ 2018, 12:27 IST
ವಿತ್ತ ಸಚಿವ ಪೀಯೂಷ್‌ ಗೋಯಲ್‌
ವಿತ್ತ ಸಚಿವ ಪೀಯೂಷ್‌ ಗೋಯಲ್‌   

ನವದೆಹಲಿ: ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರಿಂದ ಜಮೆಯಾಗಿರುವ ಹಣದ ಪ್ರಮಾಣ ಕಳೆದ ವರ್ಷ ಶೇ 35ರಷ್ಟು ಕಡಿಮೆಯಾಗಿದೆ ಹಾಗೂ 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ವಹಿಸಿದಾಗಿನಿಂದ ಶೇ 80ರಷ್ಟು ಇಳಿಕೆಯಾಗಿರುವುದಾಗಿ ವಿತ್ತ ಸಚಿವ ಪೀಯೂಷ್‌ ಗೋಯಲ್‌ ಮಂಗಳವಾರ ಹೇಳಿದ್ದಾರೆ.

ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಪ್ರಮಾಣ ಶೇ 50ರಷ್ಟು ಏರಿಕೆಯಾಗಿರುವುದಾಗಿಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ವಿರೋಧ ಪಕ್ಷದ ಇತರ ಮುಖಂಡರು ಮಾಡಿದ್ದ ಆರೋಪದ ಸಂಬಂಧ ಸ್ವಿಸ್‌ ಸರ್ಕಾರದಿಂದ ಮಾಹಿತಿ ಕೋರಿದ್ದಾಗಿ ಪಿಯೂಷ್‌ ಹೇಳಿದರು. ’ಅಂಕಿ–ಅಂಶಗಳನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಭಾರತದಲ್ಲಿನ ಸ್ವಿಸ್‌ ರಾಜಭಾರಿ ಆ್ಯಂಡ್ರಿಸ್‌ ಬೌಮ್‌ ಮಾಹಿತಿ ನೀಡಿದ್ದಾರೆ ಎಂದರು.

ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಮಾಡಿರುವ ಠೇವಣಿಯ ಸ್ಪಷ್ಟ ಮಾಹಿತಿಯನ್ನು ಬ್ಯಾಂಕ್‌ ಆಫ್‌ ಇಂಟರ್‌ನ್ಯಾಷನಲ್‌ ಸೆಟಲ್‌ಮೆಂಟ್ಸ್‌(ಬಿಐಸ್)ನಿಂದ ತಿಳಿಯಬಹುದು. ಬ್ಯಾಂಕಿಂಗ್‌ ಕಚೇರಿಯ ಪ್ರದೇಶ ಮತ್ತು ಗ್ರಾಹಕರ ಬ್ಯಾಂಕ್‌ ವಹಿವಾಟು ಆಧಾರದಲ್ಲಿ ಸ್ವಿಸ್‌ ರಾಷ್ಟ್ರೀಯ ಬ್ಯಾಂಕ್‌ ಸಹಯೋಗದಲ್ಲಿ ಎಬಿಎಸ್‌(ಲೊಕೇಶನ್‌ ಬ್ಯಾಂಕಿಂಗ್‌ ಸ್ಟಾಟಿಸ್ಟಿಕ್ಸ್‌) ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಮೂಲಕ ಸ್ವಿಸ್‌ ಹೊರ ಭಾಗದಿಂದ ನಡೆಯುವ ವಹಿವಾಟಿನ ಶೇ 95ರಷ್ಟು ಮಾಹಿತಿ ದೊರೆಯುತ್ತದೆ ಎಂದು ತಿಳಿಸಿದರು.

ADVERTISEMENT

ಬಿಐಎಸ್‌ ಅಂಕಿ–ಅಂಶಗಳ ಪ್ರಕಾರ, 2017ರಲ್ಲಿ ಠೇವಣಿ ಪ್ರಮಾಣ ಶೇ 34.5ರಷ್ಟು ಇಳಿಕೆಯಾಗಿದೆ. 2016ರಲ್ಲಿ ಆಗಿದ್ದ ಠೇವಣಿಗೆ (5,513 ಕೋಟಿ) ಹೋಲಿಸಿದರೆ 2017ರಲ್ಲಿಆಗಿರುವ ಜಮೆ (3,610 ಕೋಟಿ) ಮೊತ್ತದಲ್ಲಿ ಇಳಿಕೆಯಾಗಿರುವುದಾಗಿ ರಾಜ್ಯಸಭೆಗೆ ಮಾಹಿತಿ ನೀಡಿದರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ 2013–2017ವರೆಗೆ ಠೇವಣಿ ಪ್ರಮಾಣ ಶೇ 80.2ರಷ್ಟು ಕಡಿಮೆಯಾಗಿರುವುದಾಗಿಯೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.