ADVERTISEMENT

ಪತಂಜಲಿ ಫುಡ್ಸ್‌ ಪ್ರವರ್ತಕರ ಷೇರು ವಹಿವಾಟಿಗೆ ತಾತ್ಕಾಲಿಕ ತಡೆ

ಸಾರ್ವಜನಿಕ ಷೇರುಪಾಲಿನ ನಿಯಮ ಪಾಲಿಸಲು ವಿಫಲ

ಪಿಟಿಐ
Published 16 ಮಾರ್ಚ್ 2023, 20:41 IST
Last Updated 16 ಮಾರ್ಚ್ 2023, 20:41 IST
ರಾಮದೇವ್
ರಾಮದೇವ್   

ನವದೆಹಲಿ: ಪತಂಜಲಿ ಫುಡ್ಸ್‌ ಲಿಮಿಟೆಡ್‌ (ಪಿಎಫ್‌ಎಲ್‌) ಕಂಪನಿಯಲ್ಲಿ ಪ್ರವರ್ತಕರ ಪಾಲಿನ ಷೇರುಗಳ ವಹಿವಾಟನ್ನು ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆ ತಾತ್ಕಾಲಿಕವಾಗಿ ತಡೆಹಿಡಿದಿವೆ.

ಷೇರುಪೇಟೆಯಲ್ಲಿ ನೋಂದಾಯಿಕ ಕಂಪನಿಗಳಲ್ಲಿ ಸಾರ್ವಜನಿಕರ ಷೇರುಪಾಲು ಕನಿಷ್ಠ ಶೇಕಡ 25ರಷ್ಟು ಇರಬೇಕು ಎಂಬ ನಿಯಮ ಪಾಲಿಸಲು ವಿಫಲವಾದ ಕಾರಣಕ್ಕೆ ಷೇರುಪೇಟೆಗಳು ಪತಂಜಲಿ ಆಯುರ್ವೇದ ಒಳಗೊಂಡು ಒಟ್ಟು 21 ಪ್ರವರ್ತಕ ಕಂಪನಿಗಳ ಪಾಲಿನ ಷೇರುಗಳ ವಹಿವಾಟನ್ನು ತಾತ್ಕಾಲಿಕವಾಗಿ ತಡೆಹಿಡಿದಿವೆ ಎಂದು ಪಿಎಫ್‌ಎಲ್‌‌ ಹೇಳಿದೆ.

1957ರ ಸೆಕ್ಯುರಿಟೀಸ್‌ ಕಾಂಟ್ರ್ಯಾಕ್ಟ್ಸ್‌ (ರೆಗ್ಯುಲೇಷನ್‌) ನಿಯಮ 19ಎ(5) ಪ್ರಕಾರ, ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಯಲ್ಲಿ ಸಾರ್ವಜನಿಕರು ಕನಿಷ್ಠ ಶೇ 25ರಷ್ಟು ಷೇರುಪಾಲು ಹೊಂದುವುದು ಕಡ್ಡಾಯ.

ADVERTISEMENT

ಕಂಪನಿಯಲ್ಲಿ ಸಾರ್ವಜನಿಕರು ಹೊಂದಿರುವ ಷೇರುಪಾಲು 2019ರ ಡಿಸೆಂಬರ್‌ 18ರಂದು ಶೇ 10ಕ್ಕಿಂತಲೂ ಕೆಳಕ್ಕೆ ಇಳಿಕೆ ಕಂಡಿತ್ತು. ಕಂಪನಿಯು 2022ರ ಡಿಸೆಂಬರ್ 18ರ ಒಳಗಾಗಿ ಸಾರ್ವಜನಿಕ ಷೇರುಪಾಲನ್ನು ಶೇ 25ಕ್ಕೆ ಹೆಚ್ಚಿಸಿಕೊಳ್ಳಬೇಕಿತ್ತು. ಆದರೆ ಕಂಪನಿ ಹಾಗೆ ಮಾಡುವಲ್ಲಿ ವಿಫಲವಾಗಿದೆ. ಈ ಕಾರಣದಿಂದಾಗಿ ಪತಂಜಲಿ ಆಯುರ್ವೇದ ಲಿ. ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ, ಪತಂಜಲಿ ಪರಿವಾಹನ್, ಪತಂಜಲಿ ಗ್ರಾಮೋದ್ಯೋಗ ನ್ಯಾಸ್‌ ಸೇರಿದಂತೆ ಪತಂಜಲಿ ಸಮೂಹದ 21 ಕಂಪನಿಗಳ ಷೇರುಪಾಲನ್ನು ವಹಿವಾಟಿನಿಂದ ತಾತ್ಕಾಲಿವಾಗಿ ಸ್ಥಗಿತಗೊಳಿಸಲಾಗಿದೆ. 29.25 ಕೋಟಿ ಈಕ್ವಿಟಿ ಷೇರುಗಳ ವಹಿವಾಟು ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ಕೋವಿಡ್‌ ಸಾಂಕ್ರಾಮಿಕ ಮತ್ತು ಮಾರುಕಟ್ಟೆಯ ಅಸ್ಥಿರತೆಯ ಕಾರಣಗಳಿಂದಾಗಿ 2021ರ ಜೂನ್‌ 18ರ ವೇಳೆಗೆ ಸಾರ್ವಜನಿಕ ಷೇರುಪಾಲನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಹೀಗಿದ್ದರೂ, ಕಂಪನಿಯು 2022ರ ಮಾರ್ಚ್‌ನಲ್ಲಿ ಎಫ್‌ಪಿಒ ಮೂಲಕ ಸಾರ್ವಜನಿಕ ಷೇರುಪಾಲನ್ನು ಶೇ 19.18ಕ್ಕೆ ಹೆಚ್ಚಿಸಿದೆ. ₹2 ರ ಮುಖಬೆಲೆಯು 6.61 ಕೋಟಿ ಷೇರುಗಳನ್ನು ಮಾರಾಟ ಮಾಡಲಾಗಿದೆ. ಸದ್ಯ ಕಂಪನಿಯಲ್ಲಿ ಸಾರ್ವಜನಿಕ ಷೇರುಪಾಲು ಶೇ 19.18ರಷ್ಟು ಇದೆ. ಶೇ 25ರಷ್ಟನ್ನು ತಲುಪಲು ಸಾರ್ವಜನಿಕರ ಷೇರುಪಾಲನ್ನು ಇನ್ನು ಶೇ 5.82ರಷ್ಟು ಹೆಚ್ಚಿಸಬೇಕಿದೆ.

‘ಏಪ್ರಿಲ್‌ನಲ್ಲಿ ಎಫ್‌ಪಿಒ ಪ್ರಕ್ರಿಯೆ’
ಪತಂಜಲಿ ಫುಡ್ಸ್‌ನಲ್ಲಿ ಸಾರ್ವಜನಿಕ ಷೇರುಪಾಲನ್ನು ಶೇ 25ಕ್ಕೆ ಹೆಚ್ಚಿಸುವ ಸಂಬಂಧ ಏಪ್ರಿಲ್‌ನಲ್ಲಿ ಷೇರು ಮಾರಾಟ ಪ್ರಕ್ರಿಯೆ (ಎಫ್‌ಪಿಒ) ಆರಂಭಿಸುವುದಾಗಿ ಪತಂಜಲಿ ಸಮೂಹದ ಪ್ರವರ್ತಕ ಬಾಬಾ ರಾಮದೇವ್ ತಿಳಿಸಿದ್ದಾರೆ.

ಪ್ರವರ್ತಕರ ಪಾಲಿನ ಷೇರುಗಳ ವಹಿವಾಟಿಗೆ ತಡೆನೀಡುವ ನಿರ್ಧಾರದಿಂದ ಕಂಪನಿಯ ಹಣಕಾಸು ಮತ್ತು ಕಾರ್ಯನಿರ್ವಹಣೆ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಅವರು ಹೂಡಿಕೆದಾರರು ಮತ್ತು ಸಾರ್ವಜನಿಕ ಷೇರುದಾರರಿಗೆ ಭರವಸೆ ನೀಡಿದ್ದಾರೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾರ್ಗಸೂಚಿಗಳ ಪ್ರಕಾರ ಪ್ರವರ್ತಕರ ಷೇರುಗಳು 2023ರ ಏಪ್ರಿಲ್‌ 8ರವರೆಗೆ ಲಾಕ್‌–ಇನ್‌ (ಅವಧಿ ಕೊನೆಗೊಳ್ಳುವವರೆಗೆ ಅವುಗಳನ್ನು ಮಾರಾಟ ಮಾಡಲು ಆಗದು) ಅವಧಿಯಲ್ಲಿವೆ. ಹೀಗಾಗಿ ಷೇರುಪೇಟೆಗಳ ನಿರ್ಧಾರವು ಕಂಪನಿಯ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತೆ ಕಾಣುತ್ತಿಲ್ಲ ಎಂದು ರಾಮದೇವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.