ನವದೆಹಲಿ: 2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್), ₹280 ಕೋಟಿ ನಿವ್ವಳ ಲಾಭ ಗಳಿಸಿದೆ. 2007ರ ಬಳಿಕ ಸತತ ಎರಡು ತ್ರೈಮಾಸಿಕಗಳಲ್ಲಿ ಲಾಭ ದಾಖಲಿಸಿದೆ.
2023–24ನೇ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹849 ಕೋಟಿ ನಷ್ಟ ದಾಖಲಿಸಿತ್ತು.
ಡಿಸೆಂಬರ್ ತ್ರೈಮಾಸಿಕದಲ್ಲಿ ₹262 ಕೋಟಿ ಲಾಭ ಗಳಿಸಿತ್ತು. ಮಾರ್ಚ್ ತ್ರೈಮಾಸಿಕದಲ್ಲಿ ಲಾಭ ದಾಖಲಿಸಿದರೂ ಪೂರ್ಣ ಆರ್ಥಿಕ ವರ್ಷದಲ್ಲಿ ನಷ್ಟ ದಾಖಲಿಸಿದೆ. 2023–24ರಲ್ಲಿ ₹5,370 ಕೋಟಿ ನಷ್ಟ ದಾಖಲಿಸಿದ್ದರೆ, 2024–25ನೇ ಪೂರ್ಣ ಆರ್ಥಿಕ ವರ್ಷದಲ್ಲಿ ₹2,247 ಕೋಟಿ ನಷ್ಟ ಅನುಭವಿಸಿದೆ.
2023–24ರಲ್ಲಿ ₹19,330 ಕೋಟಿ ವರಮಾನ ಗಳಿಸಿತ್ತು. 2024–25ರಲ್ಲಿ ₹20,841 ಕೋಟಿ ವರಮಾನಗಳಿಸಿದೆ. ಒಟ್ಟಾರೆ ಶೇ 7.8ರಷ್ಟು ಹೆಚ್ಚಳವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ಕಳೆದ 18 ವರ್ಷಗಳ ಅವಧಿಯಲ್ಲಿ ಸತತ ಎರಡು ತ್ರೈಮಾಸಿಕಗಳಲ್ಲಿ ನಿವ್ವಳ ಲಾಭ ದಾಖಲಿಸಿದೆ’ ಎಂದು ಹೇಳಿದ್ದಾರೆ.
‘ವೃತ್ತಿಪರ ನಿರ್ವಹಣೆಯ ಜೊತೆಗೆ ಸರ್ಕಾರ ಮತ್ತು ನೌಕರರ ಬೆಂಬಲದಿಂದ ಈ ಸುಧಾರಣೆ ಸಾಧ್ಯವಾಗಿದೆ. ಇದು ಬಿಎಸ್‌ಎಲ್‌ಎನ್ ಅನ್ನು ಪುನರುಜ್ಜೀವನಗೊಳಿಸುವುದಷ್ಟೇ ಅಲ್ಲದೆ ಅದನ್ನು ಮರು ವ್ಯಾಖ್ಯಾನಿಸುತ್ತದೆ’ ಎಂದು ಬಿಎಸ್‌ಎಲ್‌ಎನ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಬರ್ಟ್ ಜೆ. ರವಿ ಹೇಳಿದ್ದಾರೆ.
ವೆಚ್ಚ ನಿಯಂತ್ರಣ ಹಾಗೂ 4ಜಿ, 5ಜಿ ಸೇವೆ ಒದಗಿಸುವ ಮೂಲಕ ಸುಸ್ಥಿರ ಬೆಳವಣಿಗೆ ದಾಖಲಿಸುವ ವಿಶ್ವಾಸವಿದೆ. ಪ್ರತಿಯೊಬ್ಬ ಭಾರತೀಯನಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಸಂಪರ್ಕ ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ನಾವು ಲಾಭದ ಹಿಂದೆ ಬೀಳುವುದಿಲ್ಲ. ಅದು ನಮ್ಮ ಅಂತಿಮ ಗುರಿಯೂ ಅಲ್ಲ. ಸಾರ್ವಜನಿಕರಿಗೆ ಗುಣಮಟ್ಟದ ದೂರಸಂಪರ್ಕ ಸೇವೆ ಒದಗಿಸುವುದಷ್ಟೇ ನಮ್ಮ ಆದ್ಯತೆ. ಉತ್ತಮ ಸೇವೆ ನೀಡಿದರೆ ಲಾಭ ತಾನಾಗಿಯೇ ಲಭಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.