ADVERTISEMENT

ಏರುಗತಿಯಲ್ಲಿ ಕೆಂಪು ಅಡಿಕೆ ಬೆಲೆ: ‘ರಾಶಿ ಇಡಿ’– ಬಂಪರ್‌ ಬೆಲೆ

₹55 ಸಾವಿರದ ಗಡಿ ತಲುಪಿದ ಅಡಿಕೆ ಧಾರಣೆ

ರವಿ ಕೆಳಂಗಡಿ
Published 23 ಆಗಸ್ಟ್ 2022, 19:42 IST
Last Updated 23 ಆಗಸ್ಟ್ 2022, 19:42 IST
   

ಕಳಸ: ಕೆಂಪು ಅಡಿಕೆ ಬೆಲೆ ಎರಡು ವಾರಗಳಿಂದ ಏರು ಹಾದಿಯಲ್ಲಿದ್ದು, ‘ರಾಶಿ ಇಡಿ’ ಮಾದರಿಗೆ ಕ್ವಿಂಟಲ್‌ಗೆ ₹ 55 ಸಾವಿರ ಧಾರಣೆ ಬಂದಿದೆ. ಇದು ಈ ವರ್ಷದ ಗರಿಷ್ಠ ಮಟ್ಟವಾಗಿದೆ.

ಅಡಿಕೆ ಮಾರಾಟ ಮಾಡದೆ ಉಳಿಸಿಕೊಂಡಿರುವ ಬೆಳೆಗಾರರ ಪಾಲಿಗಿದು ಬಂಪರ್‌ ಬೆಲೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಹಸಿ ಅಥವಾ ಸರಕು ಮಾದರಿ ಅಡಿಕೆಗೆ ಕ್ವಿಂಟಲ್‌ಗೆ ₹63 ಸಾವಿರದಿಂದ ₹80 ಸಾವಿರದವರೆಗೆ ಮಾರಾಟವಾಗಿದೆ.

ಬೆಟ್ಟೆ ಅಡಿಕೆ ಕ್ವಿಂಟಲ್‌ಗೆ ₹56 ಸಾವಿರ, ರಾಶಿ ಇಡಿ ಅಡಿಕೆಗೆ ₹54 ಸಾವಿರ ಬೆಲೆ ಇದೆ. ಗೊರಬಲು ಅಡಿಕೆ ಕೂಡ ₹40 ಸಾವಿರಕ್ಕೆ ಮಾರಾಟ ಆಗುತ್ತಿದೆ. ಸ್ಥಳೀಯ ವ್ಯಾಪಾರಿಗಳು ಮಂಗಳವಾರ ರಾಶಿ ಇಡಿ ಅಡಿಕೆಯನ್ನು ಕ್ವಿಂಟಲ್‌ಗೆ ₹55,500 ದರದಲ್ಲಿ ಖರೀದಿಸಿದರು.

ADVERTISEMENT

ಅಡಿಕೆಯನ್ನು ಮಾರಾಟ ಮಾಡದೆಉಳಿಸಿಕೊಂಡಿರುವಬೆಳೆಗಾರರ ಸಂಖ್ಯೆ ಶೇ 10ಕ್ಕಿಂತಲೂ ಕಡಿಮೆ ಇದ್ದು, ಬೆಲೆ ಏರಿಕೆ ಲಾಭ ಹೆಚ್ಚಿನವರಿಗೆ ಲಭಿಸುತ್ತಿಲ್ಲ. ಶೇ 50ಕ್ಕಿಂತ ಹೆಚ್ಚಿನ ಅಡಿಕೆ ಬೆಳೆಗಾರರು ಕಳೆದ ಹಂಗಾಮಿನಲ್ಲಿ ಸಂಸ್ಕರಣೆಯ ಕಿರಿಕಿರಿ ಬೇಡ ಎಂದು ಹಸಿ ಅಡಿಕೆಯನ್ನೇ ಮಾರಾಟ ಮಾಡಿದ್ದರು.

ಅಡಿಕೆ ಸಂಸ್ಕರಣೆ ಮಾಡಿ ಉಳಿಸಿಕೊಂಡಿದ್ದ ಬೆಳೆಗಾರರು, ಹಣಕಾಸಿನ ಮುಗ್ಗಟ್ಟಿನ ಕಾರಣಕ್ಕೆ ಮಳೆಗಾಲ ಆರಂಭವಾಗುವ ಮುನ್ನವೇ ಬಹುತೇಕ ಅಡಿಕೆ ಮಾರಾಟ ಮಾಡಿದ್ದಾರೆ. ಅನುಕೂಲಸ್ಥ ಬೆಳೆಗಾರರು ಮಾತ್ರ ಅಡಿಕೆಯನ್ನು ಮಾರದೆ ಉಳಿಸಿಕೊಂಡಿದ್ದಾರೆ.

ಆವಕ ಕಡಿಮೆ, ಬೆಲೆ ಏರಿಕೆ

‘ಈಗಿನ ಅಡಿಕೆ ಬೆಲೆ ಏರಿಕೆಗೆ ನಿರ್ದಿಷ್ಟ ಕಾರಣವೇ ಇಲ್ಲ’ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಕಳೆದ ಅಕ್ಟೋಬರ್‌ನಲ್ಲಿ ರಾಶಿ ಇಡಿ ಮಾದರಿಗೆ ಕ್ವಿಂಟಲ್‌ಗೆ ₹60 ಸಾವಿರ ಬೆಲೆ ಬಂದಿತ್ತು. ಆಗ ಉತ್ತರ ಭಾರತದ ವ್ಯಾಪಾರಿಯೊಬ್ಬರು ಗರಿಷ್ಠ ಬೆಲೆಗೆ ನೂರಾರು ಟನ್ ಅಡಿಕೆ ಖರೀದಿಸಿದ್ದರು.

‘ಚನ್ನಗಿರಿ, ತುಮಕೂರು ಪ್ರದೇಶದ ಅಡಿಕೆ ಸಂಸ್ಕರಣೆ ಈಗಷ್ಟೇ ಆರಂಭ ಆಗುತ್ತಿದೆ. ಮಾರುಕಟ್ಟೆಗೆ ಹೊಸ ಅಡಿಕೆ ಆವಕವಾಗುತ್ತಿಲ್ಲ. ಇದೂ ಕೂಡ ಬೆಲೆ ಏರಿಕೆಗೆ ಕಾರಣ ಇರಬಹುದು’ ಎಂಬ ಅಭಿಪ್ರಾಯವು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.