ADVERTISEMENT

ಮೌಲ್ಯಯುತ ಕಂಪನಿ ಪಟ್ಟಿ ಬಿಡುಗಡೆ: ರಾಜ್ಯದ 45 ಕಂಪನಿಗಳಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 15:44 IST
Last Updated 18 ಫೆಬ್ರುವರಿ 2025, 15:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಎಕ್ಸಿಸ್‌ ಬ್ಯಾಂಕ್‌ನ ಖಾಸಗಿ ಬ್ಯಾಂಕಿಂಗ್‌ ವ್ಯವಹಾರ ವಿಭಾಗವಾದ ಬರ್ಗಂಡಿ ಪ್ರೈವೆಟ್ ಮತ್ತು ಹುರುನ್‌ ಇಂಡಿಯಾವು, ದೇಶದ 500 ಮೌಲ್ಯಯುತ ಕಂಪನಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿವೆ.

ಕಂಪನಿಗಳನ್ನು ಅವುಗಳ ಮಾರುಕಟ್ಟೆ ಬಂಡವಾಳ ಮೌಲ್ಯದ ಅನ್ವಯ ಶ್ರೇಣೀಕರಿಸಲಾಗಿದೆ. ಈ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳು, ವಿದೇಶಿ ಮತ್ತು ಭಾರತದ ಕಂಪನಿಗಳ ಅಂಗಸಂಸ್ಥೆಗಳನ್ನು ಹೊರತುಪಡಿಸಿ ದೇಶದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪನಿಗಳು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ.

ಈ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ₹324 ಲಕ್ಷ ಕೋಟಿ ಆಗಿದೆ.

ADVERTISEMENT

ಇನ್ಫೊಸಿಸ್‌ಗೆ ಅಗ್ರಸ್ಥಾನ:

ಈ ಪಟ್ಟಿಯಲ್ಲಿ ಕರ್ನಾಟಕದ 45 ಕಂಪನಿಗಳು ಸ್ಥಾನ ಪಡೆದಿವೆ. ಈ ಪೈಕಿ 21 ನವೋದ್ಯಮಗಳಿವೆ. ಇದು ರಾಜ್ಯದ ಉದ್ಯಮಶೀಲ ಪರಿಸರ ವ್ಯವಸ್ಥೆಯು ಸದೃಢವಾಗಿರುವುದಕ್ಕೆ ಕನ್ನಡಿ ಹಿಡಿದಿದೆ ಎಂದು ವರದಿ ಹೇಳಿದೆ.

₹8 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿರುವ ಇನ್ಫೊಸಿಸ್‌ ರಾಜ್ಯದ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ. ನಂತರದ ಸ್ಥಾನದಲ್ಲಿ ₹3.2 ಲಕ್ಷ ಕೋಟಿ ಎಂ–ಕ್ಯಾಪ್‌ ಹೊಂದಿರುವ ವಿಪ್ರೊ ಕಂಪನಿ ಇದೆ. ₹3.1 ಲಕ್ಷ ಕೋಟಿ ಎಂ–ಕ್ಯಾಪ್‌ನೊಂದಿಗೆ ಟೈಟಾನ್ ಕಂಪನಿ ಆ ನಂತರದ ಸ್ಥಾನದಲ್ಲಿದೆ. 

ನವೋದ್ಯಮಗಳ ಪೈಕಿ ₹87,750 ಕೋಟಿ ಎಂ–ಕ್ಯಾಪ್‌ನೊಂದಿಗೆ ಜೆರೊದಾ ಅಗ್ರಸ್ಥಾನದಲ್ಲಿದೆ. ರೇಜರ್‌ಪೇ ₹63,620 ಕೋಟಿ ಮತ್ತು ಡೈಲಿಹಂಟ್‌ ₹42,410 ಕೋಟಿ ಮಾರುಕಟ್ಟೆ ಬಂಡವಾಳ ಹೊಂದಿವೆ.

ಕರ್ನಾಟಕದ ಕಂಪನಿಗಳು 13.1 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಂಡಿವೆ. ಇನ್ಫೊಸಿಸ್‌ 1,24,569 ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು,  ಮುಂಚೂಣಿ ಸ್ಥಾನದಲ್ಲಿದೆ. ಕ್ವೆಸ್‌ ಕಾರ್ಪ್ 95,725 ಮತ್ತು ವಿಪ್ರೊ 85,664 ಮಹಿಳೆಯರನ್ನು ನೇಮಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.