ADVERTISEMENT

ಹೂಡಿಕೆ: ರಾಜ್ಯ ಸರ್ಕಾರದ ಜತೆ ಸಹಭಾಗಿತ್ವಕ್ಕೆ ಕ್ರಮ

ಇಂಗ್ಲೆಂಡ್‌– ಭಾರತ ವಾಣಿಜ್ಯ ಮಂಡಳಿ ಆಲೋಚನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:02 IST
Last Updated 7 ಜುಲೈ 2019, 19:02 IST
ರಿಚರ್ಡ್‌ ಹೀಲ್ಡ್‌
ರಿಚರ್ಡ್‌ ಹೀಲ್ಡ್‌   

ಬೆಂಗಳೂರು: ಬಂಡವಾಳ ಹೂಡಿಕೆ ಹೆಚ್ಚಳ, ವಾಣಿಜ್ಯ ಬಾಂಧವ್ಯ ವೃದ್ಧಿ ಉದ್ದೇಶಕ್ಕೆ ಕರ್ನಾಟಕ ಸರ್ಕಾರದ ಜತೆ ಮಾತುಕತೆ ನಡೆಸಲು ಇಂಗ್ಲೆಂಡ್‌ – ಭಾರತ ವಾಣಿಜ್ಯ ಮಂಡಳಿಯು (ಯುಕೆಐಬಿಸಿ) ಉತ್ಸುಕವಾಗಿದೆ.

‘ವಿವಿಧ ರಾಜ್ಯ ಸರ್ಕಾರಗಳ ಜತೆಗಿನ ಒಪ್ಪಂದಗಳ ಮೂಲಕ ಉಭಯ ದೇಶಗಳ ನಡುವಣ ವಾಣಿಜ್ಯ ಬಾಂಧವ್ಯವನ್ನು ಮುಂದಿನ 5 ವರ್ಷಗಳಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲು ಮಂಡಳಿಯು ಶ್ರಮಿಸುತ್ತಿದೆ. ಈ ಉದ್ದೇಶ ಸಾಕಾರಗೊಳಿಸಲು ಈಗಾಗಲೇ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳ ಜತೆ ಮಂಡಳಿಯು ಒಪ್ಪಂದ ಮಾಡಿಕೊಂಡಿದೆ’ ಎಂದು ಮಂಡಳಿಯ ಸಿಇಒ ರಿಚರ್ಡ್‌ ಹೀಲ್ಡ್‌ ಹೇಳಿದ್ದಾರೆ.

ಆಕರ್ಷಕ ಹೂಡಿಕೆ ತಾಣ: ‘ಬ್ರಿಟನ್ನಿನ ಹೂಡಿಕೆದಾರರ ಪಾಲಿಗೆ ಕರ್ನಾಟಕವು ಆಕರ್ಷಕತಾಣವಾಗಿದೆ. ರಾಜ್ಯದ ಕೈಗಾರಿಕೆ, ಸಂಶೋಧನೆ ಮತ್ತಿತರ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಲು ಬ್ರಿಟನ್‌ ಉದ್ದಿಮೆದಾರರು ಉತ್ಸುಕರಾಗಿದ್ದಾರೆ. ಮಂಡಳಿಯು ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರ ಮತ್ತು ಬ್ರಿಟನ್ನಿನ ಉದ್ದಿಮೆದಾರರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ವಾಣಿಜ್ಯ ಬಾಂಧವ್ಯ ಹೆಚ್ಚಿಸಲು ರಾಜ್ಯ ಸರ್ಕಾರದ ಜತೆ ಮಾತುಕತೆ ನಡೆಸಲು ಮಂಡಳಿಯು ಉತ್ಸುಕವಾಗಿದೆ. ಹಣಕಾಸು ತಂತ್ರಜ್ಞಾನ, ಸ್ಟಾರ್ಟ್ಅಪ್‌ ಕ್ಷೇತ್ರಗಳಲ್ಲಿ ಸಹಯೋಗ ಹೆಚ್ಚಿಸುವುದು, ಹೊಸ ಮಾರುಕಟ್ಟೆ ಅವಕಾಶಗಳನ್ನು ಗುರುತಿಸುವುದು ಮಂಡಳಿಯ ಉದ್ದೇಶವಾಗಿದೆ. ಬ್ರಿಟನ್ನಿನ ಬಂಡವಾಳ ಹೂಡಿಕೆ ವಿಷಯದಲ್ಲಿ ಕರ್ನಾಟಕವು ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ನಂತರದ 3ನೇ ಅತಿದೊಡ್ಡ ರಾಜ್ಯವಾಗಿದೆ.

‘ಹೊರಗುತ್ತಿಗೆ, ಸಲಹೆ, ತಯಾರಿಕೆ, ಎಂಜಿನಿಯರಿಂಗ್‌ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು. ವಿಮೆ, ಬಿಗ್‌ ಡೇಟಾ ವಿಶ್ಲೇಷಣೆ ಕ್ಷೇತ್ರದಲ್ಲಿ ಪ್ರಮುಖ ಕಂಪನಿಗಳ ವಹಿವಾಟು ವಿಸ್ತರಣೆಗೆ ರಾಜ್ಯದಲ್ಲಿ ವಿಪುಲ ಅವಕಾಶಗಳಿವೆ’ ಎಂದು ಹೇಳಿದ್ದಾರೆ.

ಎರಡೂ ದೇಶಗಳ ನಡುವಣ ವಾಣಿಜ್ಯ ಬಾಂಧವ್ಯ ಸದೃಢವಾಗಿದೆ. ಬಂಡವಾಳ ಹೂಡಿಕೆಯೂ ಗಮನಾರ್ಹವಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಲು ಮಂಡಳಿಯು ಕಾರ್ಯಪ್ರವೃತ್ತವಾಗಿದೆ.

‘ಬ್ರಿಟನ್ನಿನ ಉದ್ದಿಮೆದಾರರು ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬಂಡವಾಳ (ಎಫ್‌ಡಿಐ) ತೊಡಗಿಸಿದ್ದಾರೆ. ಹಣಕಾಸು ಸೇವೆ ಮತ್ತು ರಫ್ತು ಕ್ಷೇತ್ರದಲ್ಲಿನ ವಹಿವಾಟು ಗಣನೀಯವಾಗಿದೆ. ಭಾರತದ 800 ಕಂಪನಿಗಳು ಬ್ರಿಟನ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಎರಡೂ ದೇಶಗಳ ಮಧ್ಯೆ ಹಲವಾರು ಜಂಟಿ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ವೈಜ್ಞಾನಿಕ, ವಾಣಿಜ್ಯ ಸಹಯೋಗಗಳಿವೆ. ಇವು ಬಾಂಧವ್ಯ ವೃದ್ಧಿಗೆ ನೆರವಾಗುತ್ತಿವೆ’ ಎಂದು ತಿಳಿಸಿದ್ದಾರೆ.

ಸರ್ಕಾರಿಯೇತರ ಸಂಘಟನೆಯಾಗಿರುವ ಈ ಮಂಡಳಿಯು ಬ್ರಿಟನ್‌ ಮತ್ತು ಭಾರತ ಸರ್ಕಾರದ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಪೂರಕವಾಗಿ ವಿವಿಧ ರಾಜ್ಯಗಳ ಜತೆ ಮಾತುಕತೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.