ADVERTISEMENT

ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆ ಏರಿಕೆ

ಪಿಟಿಐ
Published 2 ಮಾರ್ಚ್ 2026, 16:25 IST
Last Updated 2 ಮಾರ್ಚ್ 2026, 16:25 IST
ಆರ್‌ಬಿಐ
ಆರ್‌ಬಿಐ   

ಮುಂಬೈ: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ದೇಶದ ಚಾಲ್ತಿ ಖಾತೆ ಕೊರತೆ (ಸಿಎಡಿ) ₹1.21 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇ 1.3ರಷ್ಟು ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಇದು ₹1 ಲಕ್ಷ ಕೋಟಿಯಷ್ಟಾಗಿತ್ತು. ವ್ಯಾಪಾರ ಕೊರತೆ ಹೆಚ್ಚಳವೇ ಚಾಲ್ತಿ ಖಾತೆ ಕೊರತೆ ಏರಿಕೆಗೆ ಕಾರಣ ಎಂದು ತಿಳಿಸಿದೆ.

ಆದರೆ, 2024–25ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆ ₹3.35 ಲಕ್ಷ ಕೋಟಿಯಷ್ಟಿತ್ತು. ಇದು ಪ‍್ರಸಕ್ತ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹2.76 ಲಕ್ಷ ಕೋಟಿಗೆ ಇಳಿದಿದೆ.

ADVERTISEMENT

ಸರಕುಗಳ ವ್ಯಾಪಾರ ಕೊರತೆ ₹8.58 ಲಕ್ಷ ಕೋಟಿಯಷ್ಟಿದ್ದರೆ, ಸೇವೆಗಳ ನಿವ್ವಳ ಸ್ವೀಕೃತಿ ₹5.2 ಲಕ್ಷ ಕೋಟಿಯಷ್ಟಿದೆ ಎಂದು ತಿಳಿಸಿದೆ.

ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯರು ತಾಯ್ನಾಡಿಗೆ ₹3.38 ಲಕ್ಷ ಕೋಟಿ ರವಾನಿಸಿದ್ದಾರೆ. ವಿದೇಶಿ ನೇರ ಹೂಡಿಕೆಯ ಹರಿವು ₹33,917 ಕೋಟಿಯಾಗಿದೆ ಎಂದು ಆರ್‌ಬಿಐ ಹೇಳಿದೆ.

ಮೀಸಲು ಸಂಗ್ರಹ ಏರಿಕೆ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹1.77 ಲಕ್ಷ ಕೋಟಿಯಷ್ಟಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹98,068 ಕೋಟಿಯಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.