ADVERTISEMENT

ಕ್ಯಾಂಪ್ಕೊದಿಂದ ದಾಖಲೆಯ ₹1,742 ಕೋಟಿ ವ್ಯವಹಾರ; ₹41 ಕೋಟಿ ಲಾಭ: ಸತೀಶ್ಚಂದ್ರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 12:25 IST
Last Updated 27 ಸೆಪ್ಟೆಂಬರ್ 2018, 12:25 IST
ಮಂಗಳೂರಿನ ಕ್ಯಾಂಪ್ಕೊ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾಹಿತಿ ನೀಡಿದರು. ಪ್ರಜಾವಾಣಿ ಚಿತ್ರ
ಮಂಗಳೂರಿನ ಕ್ಯಾಂಪ್ಕೊ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾಹಿತಿ ನೀಡಿದರು. ಪ್ರಜಾವಾಣಿ ಚಿತ್ರ   

ಮಂಗಳೂರು: ಕ್ಯಾಂಪ್ಕೊ 2017-18 ನೇ ಸಾಲಿನಲ್ಲಿ ಒಟ್ಟು ₹1,742 ಕೋಟಿ ವ್ಯವಹಾರ ನಡೆಸುವ ಮೂಲಕ 45 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಹಕಾರ ಸಂಸ್ಥೆಯು ₹1,452.92 ಕೋಟಿ ಮೌಲ್ಯದ 52,450.12 ಟನ್ ಅಡಿಕೆಯನ್ನು ಖರೀದಿಸಿದೆ. ಇವುಗಳಲ್ಲಿ ₹717.66 ಕೋಟಿ ಮೌಲ್ಯದ 20,955.92 ಟನ್ ಕೆಂಪಡಿಕೆ ಮತ್ತು ₹735.26 ಕೋಟಿ ಮೌಲ್ಯದ 31,494.20 ಟನ್ ಬಿಳಿ ಅಡಿಕೆ ಸೇರಿದೆ ಎಂದರು.

₹1472.45 ಕೋಟಿ ಮೌಲ್ಯದ 50,566.76 ಟನ್ ಅಡಿಕೆಯನ್ನು ಮಾರಾಟ ಮಾಡಿದೆ. ₹686.30 ಕೋಟಿ ಮೌಲ್ಯದ 20,505.80 ಟನ್ ಕೆಂಪಡಿಕೆ ಮತ್ತು ₹786.14 ಕೋಟಿ ಮೌಲ್ಯದ ₹30,060.96 ಟನ್ ಬಿಳಿ ಅಡಿಕೆ ಇದರಲ್ಲಿ ಸೇರಿದೆ ಎಂದು ಹೇಳಿದರು.

ADVERTISEMENT

ಚಾಕಲೇಟ್‌ ಕಾರ್ಖಾನೆಯ ಒಟ್ಟು ಉತ್ಪಾದನೆಯ ಪ್ರಮಾಣ 13,685 ಟನ್ ಇದ್ದು, ಈ ಪೈಕಿ 9,530.39 ಟನ್ ನಮ್ಮದೇ ಬ್ರಾಂಡಿನ ಚಾಕಲೇಟ್‌ ಆಗಿದೆ. ₹182 ಕೋಟಿ ಮೌಲ್ಯದ ಚಾಕಲೇಟ್‌ ಮಾರಾಟವಾಗಿದ್ದು, ₹20 ಕೋಟಿ ಮೌಲ್ಯದ 1,308 ಟನ್ ರಫ್ತು ಮಾಡಲಾಗಿದೆ ಎಂದರು.

ಕ್ಯಾಂಪ್ಕೊ ಉತ್ಪಾದನೆಯ ಉನ್ನತ ಗುಣಮಟ್ಟದ ಸ್ವದೇಶಿ ಉತ್ಪನ್ನವೆಂಬ ಖ್ಯಾತಿಯ ‘ಡೈರಿಡ್ರೀಮ್’ ಹೆಸರಿನ ಶುದ್ಧ ಹಾಲಿನ ಚಾಕಲೇಟ್‌ಗಳು ಭಾರತೀಯ ನೌಕಾಪಡೆಯ ನೆಲೆಗಳಿಗೆ ಪೂರೈಕೆಯಾಗುತ್ತಿರುವುದು ಅಭಿಮಾನದ ವಿಷಯ ಎಂದು ತಿಳಿಸಿದರು.

ಕೊಕ್ಕೊ, ರಬ್ಬರ್‌: ಕ್ಯಾಂಪ್ಕೊ ₹17.52 ಕೋಟಿ ಮೌಲ್ಯದ 3,775.82 ಟನ್ ಕೊಕ್ಕೊ ಹಸಿಬೀಜವನ್ನು ಮತ್ತು ₹38.22 ಕೋಟಿ ಮೌಲ್ಯದ 2,190.13 ಟನ್ ಕೊಕ್ಕೊ ಒಣಬೀಜವನ್ನು ಖರೀದಿಸಿದೆ. ಒಟ್ಟು 3,483.26 ಟನ್ ಒಣಬೀಜವನ್ನು ಕಾರ್ಖಾನೆಯಲ್ಲಿ ಬಳಸಲಾಗಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ನಮ್ಮ ಸಹಕಾರಿ ಸಂಸ್ಥೆಯು ₹48.87 ಕೋಟಿ ಮೌಲ್ಯದ 3,898.30 ಟನ್ ರಬ್ಬರನ್ನು ಖರೀದಿಸಿದೆ. ₹49.85 ಕೋಟಿ ಮೌಲ್ಯದ 3,912.35 ಟನ್ ರಬ್ಬರನ್ನು ಮಾರಾಟ ಮಾಡಿದೆ ಎಂದರು.

ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಕಾಳುಮೆಣಸು ಬೆಳೆಗಳ ರಕ್ಷಣೆಗಾಗಿ ಅತ್ಯುತ್ತಮ ದರ್ಜೆಯ ಐಎಸ್‌ಐ ಗುಣಮಟ್ಟದ ಕ್ಯಾಂಪ್ಕೊ ಬ್ರಾಂಡ್ ಮೈಲುತುತ್ತು ಈಗ ಸಂಸ್ಥೆಯ ಶಾಖೆಗಳಲ್ಲಿ ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತಿದೆ. ನಮ್ಮ ಸಹಕಾರಿ ಸಂಸ್ಥೆಯು 102 ಟನ್ ಮೈಲುತುತ್ತನ್ನು ವಿವಿಧ ಶಾಖೆಗಳ ಮೂಲಕ ರಿಯಾಯಿತಿ ದರದಲ್ಲಿ ಸದಸ್ಯರಿಗೆ ವಿತರಿಸಿದೆ ಎಂದು ವಿವರಿಸಿದರು.

ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ., ಕೃಷ್ಣಪ್ರಸಾದ ಮಡ್ತಿಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.