ADVERTISEMENT

ಕೆನರಾ ಬ್ಯಾಂಕ್‌ನ ಎಟಿಎಂ ವಹಿವಾಟಿಗೆ ‘ಒಟಿಪಿ’ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 20:00 IST
Last Updated 28 ಆಗಸ್ಟ್ 2019, 20:00 IST
ಕೆನರಾ ಬ್ಯಾಂಕ್‌ ಒಟಿಪಿ
ಕೆನರಾ ಬ್ಯಾಂಕ್‌ ಒಟಿಪಿ   

ಬೆಂಗಳೂರು: ಎಟಿಎಂಗಳಿಂದ ನಗದು ಪಡೆಯುವುದನ್ನು ಹೆಚ್ಚು ಸುರಕ್ಷಿತಗೊಳಿಸಲು ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ಮೊಬೈಲ್‌ಗೆ ಒಂದು ಬಾರಿಗೆ ರಹಸ್ಯ ಸಂಖ್ಯೆ (ಒಟಿಪಿ) ಕಳಿಸುವ ಸೌಲಭ್ಯ ಜಾರಿಗೆ ತಂದಿದೆ.

ಎಟಿಎಂಗಳಿಂದ ₹ 10 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ ಪಡೆಯುವ ಸಂದರ್ಭದಲ್ಲಿ ಗ್ರಾಹಕರ ಮೊಬೈಲ್‌ಗೆ ಬರುವ ‘ಒಟಿಪಿ’ಯನ್ನು ನಮೂದಿಸಿದರೆ ಮಾತ್ರ ನಗದು ಪಡೆಯುವ ಸೌಲಭ್ಯ ಇದಾಗಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಸೌಲಭ್ಯ ಜಾರಿಗೆ ತರಲಾಗಿದೆ. ಇದರಿಂದ ಬ್ಯಾಂಕ್‌ನ ಗ್ರಾಹಕರು ತಮ್ಮ ಎಟಿಎಂ ವಹಿವಾಟನ್ನು ಹೆಚ್ಚು ಸುರಕ್ಷಿತವಾಗಿ ನಡೆಸಬಹುದಾಗಿದೆ ಎಂದು ಕೆನರಾ ಬ್ಯಾಂಕ್‌ ತಿಳಿಸಿದೆ.

ADVERTISEMENT

ಬಳಕೆಗೆ ನಿರ್ಬಂಧ?: ಎಟಿಎಂಗಳಲ್ಲಿನ ವಂಚನೆ ತಡೆಗಟ್ಟಲು ಒಂದು ಬಾರಿ ಹಣ ಪಡೆದ ನಂತರ 6 ರಿಂದ 12 ಗಂಟೆಗಳ ತನಕ ಎಟಿಎಂ ಬಳಕೆ ಮೇಲೆ ನಿರ್ಬಂಧ ವಿಧಿಸುವ ಬಗ್ಗೆ ಬ್ಯಾಂಕಿಂಗ್‌ ವಲಯದಲ್ಲಿ ಚಿಂತನೆ ನಡೆಯುತ್ತಿದೆ.

ದೆಹಲಿ ರಾಜ್ಯ ಮಟ್ಟದ ಬ್ಯಾಂಕ್‌ ಪ್ರಮುಖರ ಸಭೆಯಲ್ಲಿ ಈ ಸಲಹೆಯನ್ನು ಚರ್ಚಿಸಲಾಗಿದೆ. 24 ಗಂಟೆಗಳ ಅವಧಿಯಲ್ಲಿ ಎರಡು, ಮೂರನೇ ಬಾರಿಗೆ ಎಟಿಎಂ ಬಳಕೆ ಮೇಲೆ ನಿರ್ಬಂಧ ವಿಧಿಸುವುದರಿಂದ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎನ್ನುವ ಸಲಹೆಯು ಈ ಸಭೆಯಲ್ಲಿ ಕೇಳಿ ಬಂದಿದೆ. ಬ್ಯಾಂಕ್‌ಗಳ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೆ ತಂದರೆ ದಿನದ ಯಾವುದೇ ಹೊತ್ತಿನಲ್ಲಿ (24X7) ಹಣ ಪಡೆಯುವ ‘ಎಟಿಎಂ’ ಪರಿಕ‌ಲ್ಪನೆಗೆ ಧಕ್ಕೆ ಒದಗಲಿದೆ.

ಎಟಿಎಂ ಒಳಗಿನ ಸುರಕ್ಷತಾ ಸೌಲಭ್ಯಗಳನ್ನು ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಹೆಲ್ಮೆಟ್‌ ಧರಿಸಿ ಹಣ ಪಡೆಯಲು ಮುಂದಾದರೆ, ಹೆಲ್ಮೆಟ್‌ ತೆಗೆಯಲು ಸೂಚಿಸುವ ಸ್ವಯಂ ಚಾಲಿತ ಧ್ವನಿ ವ್ಯವಸ್ಥೆ ಅಳವಡಿಸಲು ಕ್ರಮಕೈಗೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.