ADVERTISEMENT

ಸೆಮಿಕಂಡಕ್ಟರ್ ಕೊರತೆ: ಗ್ರಾಹಕರಿಗೆ 6.5 ಲಕ್ಷ ಕಾರುಗಳ ಹಸ್ತಾಂತರ ಬಾಕಿ

ಪಿಟಿಐ
Published 21 ಜುಲೈ 2022, 17:24 IST
Last Updated 21 ಜುಲೈ 2022, 17:24 IST
   

ನವದೆಹಲಿ (ಪಿಟಿಐ): ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಸೆಮಿಕಂಡಕ್ಟರ್ ಚಿಪ್ ಕೊರತೆಯ ಕಾರಣದಿಂದಾಗಿ ಅಂದಾಜು 6.5 ಲಕ್ಷ ವಾಹನಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವುದು ಇನ್ನೂ ಬಾಕಿ ಇದೆ.

ಸೆಮಿಕಂಡಕ್ಟರ್ ಕೊರತೆಯಿಂದಾಗಿ ಕಾರು ತಯಾರಿಕೆ ವೇಗವಾಗಿ ಆಗುತ್ತಿಲ್ಲ. ಇದರಿಂದಾಗಿ ಗ್ರಾಹಕರಿಗೆ ಕಾಯುವಿಕೆ ಅವಧಿಯು ಹೆಚ್ಚುತ್ತಿದೆ.

ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ ಅಂದಾಜು 3.4 ಲಕ್ಷ ವಾಹನಗಳನ್ನು ಗ್ರಾಹಕರಿಗೆ ತಲುಪಿಸಬೇಕಿದೆ. ಹುಂಡೈ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಒಟ್ಟಾಗಿ ಅಂದಾಜು 3 ಲಕ್ಷ ವಾಹನಗಳನ್ನು ಗ್ರಾಹಕರಿಗೆ ತಲುಪಿಸಬೇಕಿದೆ. ಟಾಟಾ ಮೋಟರ್ಸ್, ಕಿಯಾ ಮತ್ತು ಹೋಂಡಾ ಕಾರ್ಸ್‌ ಕಂಪನಿಗಳಿಂದ ಗ್ರಾಹಕರಿಗೆ ತಲುಪಬೇಕಿರುವ ವಾಹನಗಳ ಸಂಖ್ಯೆ ಕೂಡ ದೊಡ್ಡದಾಗಿಯೇ ಇದೆ.

ADVERTISEMENT

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ಉಂಟಾದ ಸಮಸ್ಯೆಗಳಿಂದ ದೇಶದ ಆಟೊಮೊಬೈಲ್ ಉದ್ಯಮವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ, ಈಚಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ವಾಹನ ತಯಾರಿಕೆ ಆಗುತ್ತಿಲ್ಲ. ಐಷಾರಾಮಿ ಕಾರುಗಳ ವಿಭಾಗದಲ್ಲಿಯೂ ಈ ರೀತಿ ಆಗುತ್ತಿದೆ.

‘ನಾವು ಗ್ರಾಹಕರಿಗೆ ಹಸ್ತಾಂತರ ಮಾಡಬೇಕಿರುವ ಕಾರುಗಳ ಸಂಖ್ಯೆಯು 3.4 ಲಕ್ಷಕ್ಕಿಂತ ಹೆಚ್ಚಿದೆ’ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರುಕಟ್ಟೆ ಮತ್ತು ಮಾರಾಟ) ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.

‘ಕಳೆದ ಎರಡು ತ್ರೈಮಾಸಿಕಗಳಲ್ಲಿ ವಾಹನ ಮಾರಾಟವು ಒಂಭತ್ತು ಲಕ್ಷದ ಗಡಿಯನ್ನು ದಾಟಿದೆ. ಒಂಭತ್ತು ಲಕ್ಷದ ಗಡಿಯು ಸತತ ಎರಡು ತ್ರೈಮಾಸಿಕಗಳಲ್ಲಿ ದಾಟಿರುವುದು ಇದೇ ಮೊದಲು. ಬೇಡಿಕೆಯು ಚೆನ್ನಾಗಿದೆ ಎಂಬುದು ಇದರ ಅರ್ಥ’ ಎಂದು ಅವರು ಹೇಳಿದ್ದಾರೆ.

ಎರಡು ವರ್ಷಗಳಿಂದ ಆಟೊಮೊಬೈಲ್ ಉದ್ಯಮವನ್ನು ಕಾಡುತ್ತಿರುವ ಸೆಮಿಕಂಡಕ್ಟರ್ ಚಿಪ್ ಕೊರತೆಯ ಕಾರಣದಿಂದಾಗಿ ವಾಹನಗಳನ್ನು ಗ್ರಾಹಕರಿಗೆ ತಲುಪಿಸುವುದು ವಿಳಂಬವಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಯಾಣಿಕ ವಾಹನಗಳಿಗೆ ಕಾಯುವಿಕೆ ಅವಧಿಯು ವಾಹನದ ಮಾದರಿ, ಬಣ್ಣ ಆಧರಿಸಿ ನಾಲ್ಕರಿಂದ ಹನ್ನೆರಡು ವಾರಗಳವರೆಗೆ ಇದೆ ಎಂದು ಟಾಟಾ ಮೋಟರ್ಸ್‌ನ ವಕ್ತಾರರು ಹೇಳಿದ್ದಾರೆ. ಇ.ವಿ. ಕಾಯುವಿಕೆ ಅವಧಿಯು ಗರಿಷ್ಠ ಆರು ತಿಂಗಳವರೆಗೂ ಇದೆ ಎಂದಿದ್ದಾರೆ.

ಕಂಪನಿಯ ಕಾರುಗಳಿಗೆ ಕಾಯುವಿಕೆ ಅವಧಿಯು 2 ತಿಂಗಳಿಂದ 9 ತಿಂಗಳವರೆಗೆ ಇದೆ ಎಂದು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ನಿರ್ದೇಶಕ ಯುಇಚಿ ಮುರಾಟಾ ಹೇಳಿದ್ದಾರೆ.

=

ಹಿಂದಕ್ಕೆ ಕರೆಸಿಕೊಂಡ ವಾಹನಗಳ ಸಂಖ್ಯೆ 13 ಲಕ್ಷ

ನವದೆಹಲಿ (ಪಿಟಿಐ): ಸುರಕ್ಷತೆಗೆ ಸಂಬಂಧಿಸಿದ ವಿಷಯಗಳಿಗಾಗಿ 2021–22ರಲ್ಲಿ ಹಿಂದಕ್ಕೆ ಕರೆಸಿಕೊಂಡ ದ್ವಿಚಕ್ರ ವಾಹನಗಳು ಹಾಗೂ ಪ್ರಯಾಣಿಕ ವಾಹನಗಳ ಒಟ್ಟು ಸಂಖ್ಯೆ 13 ಲಕ್ಷಕ್ಕೂ ಹೆಚ್ಚು ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ತಿಳಿಸಿದೆ.

8.64 ಲಕ್ಷ ದ್ವಿಚಕ್ರ ವಾಹನಗಳನ್ನು, 4.67 ಲಕ್ಷ ಪ್ರಯಾಣಿಕ ವಾಹನಗಳನ್ನು 2021–22ರಲ್ಲಿ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಜುಲೈ 15ರವರೆಗೆ 1.60 ಲಕ್ಷ ದ್ವಿಚಕ್ರ ವಾಹನಗಳನ್ನು ಹಾಗೂ 25 ಸಾವಿರ ಪ್ರಯಾಣಿಕ ವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.