ADVERTISEMENT

ಸಾಲದ ಸುಳಿಯಲ್ಲಿದ್ದ ಕಾಫಿ ಸಾಮ್ರಾಟ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:30 IST
Last Updated 6 ಆಗಸ್ಟ್ 2019, 19:30 IST
ಚಿತ್ರ: ಗುರು ನಾವಳ್ಳಿ
ಚಿತ್ರ: ಗುರು ನಾವಳ್ಳಿ   

ಚೈತನ್ಯದ ಚಿಲುಮೆಯಂತಿದ್ದ ವಿ. ಜಿ. ಸಿದ್ಧಾರ್ಥ ಅವರು ಕಟ್ಟಿ ಬೆಳೆಸಿದ್ದ ಕಾಫಿ ಡೇ ಎಂಟರ್‌ಪ್ರೈಸಿಸ್‌ ಸಮೂಹದ ಉದ್ಯಮ ಸಾಮ್ರಾಜ್ಯವು ಸಾಲದ ಸುಳಿಯಲ್ಲಿ ಸಿಲುಕಿ ಪ್ರವರ್ತಕನನ್ನೇ ಆಪೋಶನ ತೆಗೆದುಕೊಂಡಿರುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ಕಾಫಿ ಸಂಸ್ಕೃತಿ ಪಸರಿಸಿದ ಹೆಗ್ಗಳಿಕೆಯ ಉದ್ಯಮಶೀಲತೆಯ ಉತ್ಸಾಹಿ ವಿ. ಜಿ. ಸಿದ್ಧಾರ್ಥ ಅವರ ಸಾವು ದೇಶದಲ್ಲಿ ಆದಾಯ ತೆರಿಗೆ ಇಲಾಖೆಯ ‘ತೆರಿಗೆ ಭಯೋತ್ಪಾದನೆ’ ಬಗ್ಗೆ ತೀವ್ರ ಚರ್ಚೆ ಹುಟ್ಟು ಹಾಕಿದೆ. ವಿನೀತ ಸ್ವಭಾವದ ಕನಸುಗಾರ ಕಟ್ಟಿ ಬೆಳೆಸಿದ ಉದ್ಯಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಮಾಡಿದ ಸಾಲಗಳೇ ಮುಳುವಾಗಿರುವುದು ವ್ಯವಸ್ಥೆಯ ವೈಫಲ್ಯವೇ ಅಥವಾ ಉದ್ಯಮಶೀಲತೆಯ ವೈಫಲ್ಯವೇ ಎನ್ನುವುದು ಚರ್ಚಾಸ್ಪದವಾಗಿದೆ. ವಹಿವಾಟಿನ ವೈಫಲ್ಯಗಳು ಉದ್ಯಮಶೀಲರ ಆತ್ಮಗೌರವವನ್ನೇ ನಾಶ ಮಾಡಲು ಅವಕಾಶ ಮಾಡಿಕೊಟ್ಟ ವ್ಯವಸ್ಥೆಯ ಪಾಲೂ ಇದರಲ್ಲಿ ಇದೆ ಎನ್ನಬಹುದು.

ಶ್ರೇಷ್ಠ ಮಾನವೀಯ ವ್ಯಕ್ತಿ ಮತ್ತು ಮಹತ್ವಾಕಾಂಕ್ಷೆಯ ಉದ್ಯಮಿಯಾಗಿದ್ದ ಸಿದ್ಧಾರ್ಥ ಅವರಿಗೆ ಸಾಲಗಾರರು, ತೆರಿಗೆ ಇಲಾಖೆ ಕೊಟ್ಟ ಕಿರುಕುಳಗಳೇ ಮುಳುವಾಗಿರುವುದು ಅವರು ಬರೆದಿರುವರು ಎನ್ನಲಾದ ಪತ್ರದಲ್ಲಿನ ವಿವರಗಳಿಂದ ತಿಳಿದು ಬರುತ್ತದೆ. ಸಾಲದ ಸುಳಿಯಿಂದ ಹೊರ ಬರಲು ಅವರ ಮುಂದೆ ಬೇರೆ ಆಯ್ಕೆಗಳೇ ಇರಲಿಲ್ಲವೇ. ಸಾಲ ಮರು ಪಾವತಿಸುವ ಒತ್ತಡ, ಸಕಾಲಕ್ಕೆ ಕೋಟ್ಯಂತರ ರೂಪಾಯಿಗಳ ಸಾಲ ಸಿಗದಿರುವುದರಿಂದ ಸಿದ್ಧಾರ್ಥ ಅವರು ಹತಾಶರಾಗಿ ಬದುಕಿಗೆ ಬೆನ್ನು ಮಾಡಿದರೆ ಎನ್ನುವ ಪ್ರಶ್ನೆಗಳಿಗೆ ಸದ್ಯಕ್ಕಂತೂ ಉತ್ತರ ಸಿಕ್ಕಿಲ್ಲ.

ADVERTISEMENT

ಬ್ಯಾಂಕ್, ಖಾಸಗಿ ಷೇರು ಹೂಡಿಕೆದಾರ ಮತ್ತು ತೆರಿಗೆ ಅಧಿಕಾರಿಗಳು ನೀಡಿದ ಕಿರುಕುಳದಿಂದ ಪಾರಾಗಲು ತಮಗೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ಮಾರ್ಗ ಉಳಿದಿತ್ತು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಾಫಿ ಸಾಮ್ರಾಟನು ಬದುಕಿಗೆ ವಿಮುಖನಾಗಿ ಸಾವಿಗೆ ಮುಖಾಮುಖಿ ಆಗಿರುವುದು ಖಚಿತವಾಗುತ್ತಿದ್ದಂತೆ ತೆರಿಗೆ ಕಿರುಕುಳ ವಿರುದ್ಧ ಉದ್ದಿಮೆ ವಲಯದಿಂದ ಟೀಕಾ ಪ್ರಹಾರವೇ ಹರಿದು ಬರಲಾರಂಭಿಸಿತು. ಕೈಗಾರಿಕೆ ಮತ್ತು ಉದ್ಯಮದ ಕೆಲ ಪ್ರಮುಖರು ತೆರಿಗೆ ಅಧಿಕಾರಿಗಳು ಮತ್ತು ಸರ್ಕಾರದ ಕೆಲ ಸಂಸ್ಥೆಗಳಿಂದ ಉದ್ಯಮಿಗಳು ಕಿರುಕುಳಕ್ಕೆ ಗುರಿಯಾಗಿದ್ದಾರೆ ಎಂದೂ ಕೆಲವರು ಹುಯಿಲೆಬ್ಬಿಸಿದ್ದಾರೆ.

‘ಉದ್ದಿಮೆ ವಹಿವಾಟು ಆರಂಭಿಸಲು, ವಿಸ್ತರಿಸಲು ತೆರಿಗೆ ಭಯೋತ್ಪಾದನೆಯು ಅತಿದೊಡ್ಡ ಅಡಚಣೆಯಾಗಿದೆ’ ಎಂದು ಕೆಲ ಉದ್ಯಮಿಗಳು ಸರ್ಕಾರದ ಮೇಲೆ ಮುಗಿ ಬಿದ್ದಿದ್ದಾರೆ. ಈ ಟೀಕೆ ಸರಿಯೇ ಎನ್ನುವ ಪ್ರಶ್ನೆಗಳೂ ಉದ್ಭವಾಗಿವೆ. ಸಾಲ ನೀಡಿದವರು ಮರು ಪಾವತಿಗೆ ಒತ್ತಾಯಿಸಬಾರದೆ, ಕಾನೂನಿನ ಪ್ರಕಾರ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ನಿಯಮಗಳ ಅನ್ವಯ ಕ್ರಮಗಳನ್ನು ಕೈಗೊಳ್ಳಬಾರದೆ ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳು ತೆರಿಗೆ ವಸೂಲಿ ಮಾಡದಿದ್ದರೆ ಕರ್ತವ್ಯಲೋಪ ಎಸಗಿದ, ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.

ಸರ್ಕಾರ ಕೆಲವರನ್ನು ಗುರಿಯಾಗಿರಿಸಿಕೊಂಡು ತುಂಬ ವ್ಯವಸ್ಥಿತವಾಗಿ ಕಿರುಕುಳ ನೀಡುವುದನ್ನು ಎದುರಿಸುವುದೇ ಉದ್ಯಮಿಗಳ ಪಾಲಿಗೆ ಬಹುದೊಡ್ಡ ಸವಾಲಾಗಿದೆ ಎಂದೂ ಅನೇಕರು ಹೇಳಿದ್ದಾರೆ. ವಹಿವಾಟಿನಲ್ಲಿನ ವೈಫಲ್ಯವು ಉದ್ಯಮಿಗಳ ಆತ್ಮಗೌರವ ಹಾಳು ಮಾಡಲು ಅವಕಾಶ ಮಾಡಿಕೊಟ್ಟರೆ ಅದರಿಂದ ಉದ್ಯಮಶೀಲತೆಯೇ ನಾಶವಾಗುತ್ತದೆ ಎಂದೂ ಉದ್ಯಮಿಗಳು ಎಚ್ಚರಿಸಿದ್ದಾರೆ. ಕರ್ತವ್ಯಪಾಲನೆ ಮತ್ತು ಕಿರುಕುಳ ನಡುವಣ ಅಂತರ ತುಂಬ ಸೂಕ್ಷ್ಮವಾಗಿದೆ. ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೆಲವೊಮ್ಮೆ ತೋರುವ ಹುರುಪು ಕೆಲವರ ಪಾಲಿಗೆ ಕಿರುಕುಳದಂತೆ ಭಾಸವಾಗಬಹುದು.

ಸಿದ್ಧಾರ್ಥ ಅವರು ಕಾಣೆಯಾಗಿರುವುದು ವರದಿಯಾಗುತ್ತಿದ್ದಂತೆ ಅವರ ಬದುಕನ್ನೇ ಆಪೋಶನ ತೆಗೆದುಕೊಂಡ ಹಣಕಾಸಿನ ಬಿಕ್ಕಟ್ಟಿನ ವಿವರಗಳು ಒಂದೊಂದಾಗಿ ಬಹಿರಂಗಗೊಳ್ಳತೊಡಗಿದವು. ಚಹಾ ಪ್ರೇಮಿ ಭಾರತೀಯರಿಗೆ ಕಾಫಿ ಸ್ವಾದದ ರುಚಿ ಹತ್ತಿಸಿ, ಕೆಫೆ ಕಾಫಿ ಡೇ (ಸಿಸಿಡಿ) ಮನೆಮಾತಾಗಿಸಿದ ಸಿದ್ಧಾರ್ಥ ಅವರ ಹಣಕಾಸಿನ ವಿವರಗಳು ಬೇರೆಯೇ ಆದ ಕತೆ ಹೇಳುತ್ತವೆ. ಎರಡು ವರ್ಷಗಳಿಂದೀಚೆಗೆ ಅವರು ಸಾಲ ಮರುಪಾವತಿಗಾಗಿ ಸಾಕಷ್ಟು ಹೆಣಗಿದ್ದರು ಎನ್ನುವುದಕ್ಕೆ ಅಧಿಕೃತ ಅಂಕಿ ಅಂಶಗಳೇ ಸಾಕ್ಷ್ಯ ಒದಗಿಸುತ್ತವೆ. ಕಾಫಿ ಡೇ ಎಂಟರ್‌ಪ್ರೈಸಿಸ್‌ ಲಿಮಿಟೆಡ್‌ನಲ್ಲಿನ (ಸಿಡಿಇಎಲ್‌) ತಮ್ಮ ಬಹುಪಾಲು ಷೇರುಗಳನ್ನು ಅಡಮಾನ ಇಟ್ಟು ಅಧಿಕ ಬಡ್ಡಿ ದರದಲ್ಲಿ ಸಾಲ ಪಡೆದಿದ್ದರು. ಸಾಲ ಮರುಪಾವತಿ ಅವಧಿಯೂ ಅಲ್ಪಾವಧಿಯದಾಗಿತ್ತು. ಈ ಸಾಲವು ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ದುಪ್ಪಟ್ಟಾಗಿತ್ತು.

‘ಸಿಡಿಇಎಲ್‌’ನ ಖಾಸಗಿ ಷೇರು ಹೂಡಿಕೆದಾರರೊಬ್ಬರು, ಕಂಪನಿಯ ಷೇರುಗಳನ್ನು ಮರು ಖರೀದಿಸಲು ಒತ್ತಾಯಿಸಿದ್ದರು. ಮೈಂಡ್‌ಟ್ರೀನಲ್ಲಿನ ಷೇರು ಮಾರಾಟ ವಹಿವಾಟಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿಸಲು ಅಧಿಕಾರಿಗಳು ಕಿರುಕುಳ ನೀಡಿದ್ದರು. ಈ ಕಾರಣಗಳಿಗಾಗಿಯೇ ತಾವು ಹತಾಶರಾಗಿದ್ದಾಗಿ ಸಿದ್ಧಾರ್ಥ ಬರೆದುಕೊಂಡಿದ್ದಾರೆ. ಲೆಕ್ಕಕ್ಕೆ ಸಿಗದ ₹ 350 ಕೋಟಿ ಆದಾಯ ಹೊಂದಿದ್ದನ್ನು ಸಿದ್ಧಾರ್ಥ ಒಪ್ಪಿಕೊಂಡಿದ್ದರು. ತೆರಿಗೆ ಪಾವತಿಸದಿರುವುದಕ್ಕೆ ಪ್ರತಿಯಾಗಿ ‘ಸಿಡಿಇಎಲ್‌’ ಷೇರುಗಳನ್ನು ಇಲಾಖೆಯಲ್ಲಿ ಅಡಮಾನ ಇಡುವವರೆಗೆ ಮೈಂಡ್‌ಟ್ರೀನಲ್ಲಿನ ಷೇರುಗಳ ಮಾರಾಟಕ್ಕೆ ತಡೆ ನೀಡಲಾಗಿತ್ತು ಎಂದು ತೆರಿಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆತ್ಮಹತ್ಯೆಗೂ ಮುಂಚೆ ಸಿದ್ಧಾರ್ಥ ಅವರು ಎರಡು ವಾರಗಳ ಕಾಲ ಮುಂಬೈನಲ್ಲಿದ್ದು ಸಾಲ ಮರುಪಾವತಿಗೆ ಹಣ ಹೊಂದಿಸಲು ಪ್ರಯತ್ನಿಸಿದ್ದರು. ಜುಲೈ ಮತ್ತು ಆಗಸ್ಟ್‌ನಲ್ಲಿ ಸಾಲ ಮರುಪಾವತಿಸುವ ಅನಿವಾರ್ಯತೆ ಅವರಿಗೆ ಎದುರಾಗಿತ್ತು. ಆರ್ಥಿಕತೆಯಲ್ಲಿ ಕಂಡು ಬಂದಿರುವ ನಗದು ಬಿಕ್ಕಟ್ಟು ಮತ್ತು ಕುಂಠಿತ ಆರ್ಥಿಕ ಪ್ರಗತಿಯ ಒತ್ತಡವೂ ಸಿದ್ಧಾರ್ಥ ಅವರು ಕೈಗೊಂಡ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.

ವಹಿವಾಟು ಮತ್ತು ಬದುಕಿನ ಮಧ್ಯೆ ಸಮತೋಲನ ಸಾಧಿಸುವಲ್ಲಿ ಸಿದ್ಧಾರ್ಥ ಅವರು ವಿಫಲರಾದಂತೆ ಕಂಡು ಬರುತ್ತದೆ. ತಮ್ಮ ಷೇರುಗಳನ್ನು ಮರು ಖರೀದಿಸಲು ಖಾಸಗಿ ಹೂಡಿಕೆದಾರರು (ಪಿಇ) ಹೇರಿದ ಒತ್ತಡ, ಈ ಕಾರಣಕ್ಕೆ ಮಾಡಿದ ದೊಡ್ಡ ಮೊತ್ತದ ಸಾಲ ಮತ್ತು ತೆರಿಗೆ ಅಧಿಕಾರಿಗಳು ನೀಡಿದ ಕಿರುಕುಳ – ಇವೆಲ್ಲವುಗಳ ಒತ್ತಡ ತಡೆಯಲಾರದೆ ಅವರು ಬದುಕಿಗೆ ವಿದಾಯ ಹೇಳುವ ಅನಿವಾರ್ಯಕ್ಕೆ ಮುಂದಾಗಿರಬಹುದು. ದೇಶದಲ್ಲಿ ಕಾರ್ಪೊರೇಟ್‌ ಸಾಲದ ಮಾರುಕಟ್ಟೆಯು ನಿಷ್ಕ್ರಿಯಗೊಂಡಿರುವುದು ಮತ್ತು ಸಾಲ ಮರುಪಾವತಿಗೆ ಷೇರುಗಳನ್ನು ಅಡಮಾನ ಇಡುವ ಪ್ರಕ್ರಿಯೆಲ್ಲಿನ ಕಠಿಣ ಪ್ರಕ್ರಿಯೆಗಳು ಸಿದ್ಧಾರ್ಥ ಅವರ ಕೈಕಟ್ಟಿ ಹಾಕಿದ್ದವು.

‘ಸಿಸಿಡಿ’ ಬ್ರ್ಯಾಂಡ್‌ ಸೃಷ್ಟಿಸಿ ಜನಪ್ರಿಯಗೊಳಿಸಿದ್ದ ಸಿದ್ಧಾರ್ಥ ಅವರಿಗೆ ಹಣ ಸಂಗ್ರಹಿಸುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ. ನಮ್ಮಲ್ಲಿನ ಕಾರ್ಪೊರೇಟ್ ಸಾಲದ ಮಾರುಕಟ್ಟೆ ನಿಷ್ಕ್ರಿಯಗೊಂಡಿದ್ದರಿಂದ ಸಾಲ ಪಡೆಯುವುದು ಅವರಿಗೆ ಸವಾಲಿನ ಕೆಲಸವಾಗಿತ್ತು. ಹೀಗಾಗಿ ಅವರು ‘ಸ್ನೇಹಿತರು’ ಮತ್ತು ಖಾಸಗಿ ಹೂಡಿಕೆದಾರರಿಂದ ಸಾಲ ಪಡೆಯುವುದು ಅನಿವಾರ್ಯವಾಗಿತ್ತು. ದುಬಾರಿ ಬಡ್ಡಿ ದರ ಮತ್ತು ಅಲ್ಪಾವಧಿಯಲ್ಲಿ ಸಾಲ ಮರುಪಾವತಿಯ ಕಾರಣಕ್ಕೆ ಇದು ಅವರಿಗೆ ತುಂಬ ದುಬಾರಿ ಹೊರೆಯಾಗಿ ಪರಿಣಮಿಸಿತ್ತು. ಬಹುತೇಕ ಸಂದರ್ಭಗಳಲ್ಲಿ ಇಂತಹ ಹಣಕಾಸಿನ ನೆರವು ಅಥವಾ ಹೂಡಿಕೆಯು ಒಂದರ್ಥದಲ್ಲಿ ಸುಲಿಗೆ ರೂಪದಲ್ಲಿ ಇರುತ್ತದೆ. ವ್ಯವಸ್ಥೆಯೇ ಹಾಗಿರುವಾಗ ಇಲ್ಲಿ ಹೂಡಿಕೆದಾರರನ್ನೂ ದೂಷಿಸುವಂತಿಲ್ಲ. ತೆರಿಗೆ ಅಧಿಕಾರಿಗಳ ಜತೆ ಸಂಘರ್ಷಕ್ಕೆ ಇಳಿಯುವುದು ಸ್ವಯಂಕೃತಾಪರಾಧವೂ ಆಗಿರುತ್ತದೆ. ತೆರಿಗೆ ಅಧಿಕಾರಿಗಳು ಮತ್ತು ತೆರಿಗೆ ಪಾವತಿಸುವವರ ಮಧ್ಯೆ ಉತ್ತಮ ಬಾಂಧವ್ಯ ಇರುವುದು ಅಪೇಕ್ಷಣೀಯ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕು. ಸ್ಫೂರ್ತಿದಾಯಕ ಉದ್ಯಮಿ ಮತ್ತು ಹೂಡಿಕೆದಾರನ ಸಾವು ಎಲ್ಲರಿಗೂ ಒಂದು ಪಾಠವಾಗಲಿ.

₹ 13.35 ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿ

ಆರ್ಥಿಕ ಪ್ರಗತಿ ಮಂದಗತಿಯಲ್ಲಿ ಇರುವುದರಿಂದ ಆರ್ಥಿಕ ಪ್ರಗತಿಗೆ ಚೇತರಿಕೆ ನೀಡಲು ಸರ್ಕಾರಿ ವೆಚ್ಚ ಹೆಚ್ಚಬೇಕಾಗಿದೆ. ಈ ಕಾರಣಕ್ಕೆ ಸರ್ಕಾರ ತೆರಿಗೆ ಸಂಗ್ರಹ ಹೆಚ್ಚಿಸಲು ಮುಂದಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹದ ಗುರಿಯನ್ನು ₹ 13.35 ಲಕ್ಷ ಕೋಟಿಗೆ ನಿಗದಿ ಮಾಡಲಾಗಿದೆ. ಈ ಮೊತ್ತವು ಹಿಂದಿನ ವರ್ಷಕ್ಕಿಂತ ಶೇ 15ರಷ್ಟು ಹೆಚ್ಚಿಗೆ ಇದೆ.

ಪಾಲು ಬಂಡವಾಳ

53.93 %; 6 ಮಂದಿ ಪ್ರವರ್ತಕರು ಮತ್ತು ಪ್ರವರ್ತಕರ ಸಮೂಹದ ಪಾಲು

46.03 %; ಸಾರ್ವಜನಿಕರ ಪಾಲು

ಉದ್ಯಮದ ಸ್ವರೂಪ

ಕಾಫಿ ಡೇ ಗ್ಲೋಬಲ್‌; ಕಾಫಿ ವಹಿವಾಟು

ಸಿಕಾಲ್‌; ಸರಕು ಸಾಗಣೆ

ವೇ 2 ವೆಲ್ತ್‌; ಹಣಕಾಸು ಸೇವೆ

ಟ್ಯಾಂಗ್ಲಿನ್‌ ಡೆವಲಪ್‌ಮೆಂಟ್ಸ್‌ ಲಿ; ವಾಣಿಜ್ಯ ಉದ್ದೇಶದ ರಿಯಲ್‌ ಎಸ್ಟೇಟ್‌

ಕಾಫಿ ಡೇ ರೆಸಾರ್ಟ್ಸ್‌, ಕರ್ನಾಟಕ ವೈಲ್ಡ್‌ ಲೈಫ್‌ ರೆಸಾರ್ಟ್ಸ್‌; ಹೋಟೆಲ್‌ ಉದ್ದಿಮೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.