ADVERTISEMENT

ಅಮೆಜಾನ್‌ಗೆ ಸಿಸಿಐನಿಂದ ₹ 202 ಕೋಟಿ ದಂಡ

ಪಿಟಿಐ
Published 17 ಡಿಸೆಂಬರ್ 2021, 20:56 IST
Last Updated 17 ಡಿಸೆಂಬರ್ 2021, 20:56 IST
ಅಮೆಜಾನ್‌
ಅಮೆಜಾನ್‌   

ನವದೆಹಲಿ: ಫ್ಯೂಚರ್‌ ಕೂಪನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಷೇರು ಸ್ವಾಧೀನ ಮಾಡಿಕೊಳ್ಳಲು ಅಮೆಜಾನ್‌ಕಂಪನಿ ಮಾಡಿಕೊಂಡಿದ್ದ ಒಪ್ಪಂದಕ್ಕೆ ಎರಡು ವರ್ಷಗಳ ಹಿಂದೆ ನೀಡಿದ್ದ ಅನುಮತಿಯನ್ನು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಶುಕ್ರವಾರ ರದ್ದುಪಡಿಸಿದೆ. ಅಲ್ಲದೆ, ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಮೆಜಾನ್‌ಗೆ ಒಟ್ಟು ₹ 202 ಕೋಟಿ ದಂಡ ವಿಧಿಸಿದೆ.

ರಿಲಯನ್ಸ್‌ ರಿಟೇಲ್‌ ವೆಂಚರ್‌ ಲಿಮಿಟೆಡ್‌ (ಆರ್‌ಆರ್‌ವಿಎಲ್‌) ಜೊತೆಗೆ ಫ್ಯೂಚರ್‌ ಸಮೂಹ ಮಾಡಿ ಕೊಂಡಿರುವ ₹ 24,713 ಕೋಟಿ ಮೊತ್ತದ ಒಪ್ಪಂದದ ವಿಚಾರವಾಗಿ ಅಮೆಜಾನ್ ಮತ್ತು ಫ್ಯೂಚರ್ ಸಮೂಹದ ನಡುವೆ ಕಾನೂನು ಸಮರ ನಡೆಯುತ್ತಿರುವ ಹೊತ್ತಿನಲ್ಲಿಯೇ ಸಿಸಿಐ ಈ ಆದೇಶ ಹೊರಡಿಸಿದೆ.

ಶುಕ್ರವಾರ 57 ಪುಟಗಳ ಆದೇಶ ಹೊರಡಿಸಿರುವ ಸಿಸಿಐ ‘ಅಮೆಜಾನ್‌ ಮತ್ತು ಫ್ಯೂಚರ್‌ ಕೂಪನ್‌ ನಡುವಿನ ಒಪ್ಪಂದಕ್ಕೆ ನೀಡಿದ್ದ ಅನುಮತಿಯನ್ನು ಅಮಾನತ್ತಿನಲ್ಲಿ ಇರಿಸಲಾಗಿದೆ’ ಎಂದು ಹೇಳಿದೆ.

ADVERTISEMENT

ಕಂಪನಿಗಳ ನಡುವಿನ ಹೊಂದಾಣಿಕೆಯ ನೈಜ ವ್ಯಾಪ್ತಿ ಮತ್ತು ಉದ್ದೇಶವನ್ನು ಮುಚ್ಚಿಡಲು ಅಮೆ ಜಾನ್‌ ಯತ್ನಿಸಿದ ಕಾರಣದಿಂದಾಗಿ ಕೆಲವು ಉಲ್ಲಂಘನೆಗಳು ಆಗಿವೆ ಎಂದು ಹೇಳಿರುವ ಸಿಸಿಐ, ಇದಕ್ಕಾಗಿ ಅಮೆಜಾನ್‌ಗೆ ₹ 2 ಕೋಟಿ ದಂಡ ವಿಧಿಸಿದೆ. ಕಂಪನಿಗಳ ನಡುವಣ ಹೊಂದಾಣಿಕೆಯನ್ನು ನಿರ್ದಿಷ್ಟ ಕ್ರಮದಲ್ಲಿ ತಿಳಿಸಲು ವಿಫಲವಾಗಿದ್ದಕ್ಕಾಗಿ ಅಮೆ ಜಾನ್‌ಗೆ ₹ 200 ಕೋಟಿ ದಂಡ ವಿಧಿಸಿದೆ.

ಸಿಸಿಐ ಆದೇಶದ ಕುರಿತು ಪ್ರತಿ ಕ್ರಿಯೆ ನೀಡಿರುವ ಅಮೆಜಾನ್‌ ವಕ್ತಾರರು, ‘ಆದೇಶವನ್ನು ನಾವು ಪರಿಶೀಲಿಸುತ್ತಿದ್ದೇವೆ. ಮುಂದಿನ ಕ್ರಮದ ಕುರಿತು ನಿರ್ಧರಿಸುತ್ತೇವೆ’ಎಂದು ಹೇಳಿದ್ದಾರೆ.ಸ್ವಾಧೀನ ಮಾಡಿ ಕೊಳ್ಳುವ ಸಂಸ್ಥೆ ನೀಡಿರುವ ಮಾಹಿತಿ ತಪ್ಪಾಗಿದ್ದರೆ, ಅನುಮತಿ ಆದೇಶ ಹಿಂಪಡೆಯಲಾಗುವುದು ಎಂದು 2019ರಲ್ಲಿ ಸಿಸಿಐ ಹೇಳಿತ್ತು.

ಫ್ಯೂಚರ್‌ ಕೂಪನ್ಸ್‌ನಲ್ಲಿನ ಶೇಕಡ 49ರಷ್ಟು ಷೇರುಗಳನ್ನು ಖರೀದಿಸಲು ಅಮೆಜಾನ್‌ 2019ರ ಆಗಸ್ಟ್‌ನಲ್ಲಿ ಒಪ್ಪಿತ್ತು. 2020ರ ಆಗಸ್ಟ್‌ನಲ್ಲಿ ರಿಲ ಯನ್ಸ್ ರಿಟೇಲ್‌ ವೆಂಚರ್ಸ್ ಲಿಮಿಟೆಡ್ ಕಂಪನಿಯು, ಫ್ಯೂಚರ್ ಸಮೂಹದ ರಿಟೇಲ್ ವಹಿವಾಟು, ಸಗಟು ವಹಿ ವಾಟು, ಸರಕು ಸಾಗಣೆ ಮತ್ತು ಗೋದಾಮು ವಹಿವಾಟುಗಳನ್ನು ಸ್ವಾಧೀನ ಮಾಡಿಕೊಳ್ಳುವುದಾಗಿ ಪ್ರಕಟಿ ಸಿತು. ಇದನ್ನು ಅಮೆಜಾನ್‌ ಪ್ರಶ್ನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.