ADVERTISEMENT

ಗೂಗಲ್‌ಗೆ ₹1,337 ಕೋಟಿ ದಂಡ: ಭಾರತೀಯ ಸ್ಪರ್ಧಾ ಆಯೋಗದ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 19:58 IST
Last Updated 20 ಅಕ್ಟೋಬರ್ 2022, 19:58 IST
   

ನವದೆಹಲಿ: ಆ್ಯಂಡ್ರಾಯ್ಡ್‌ ಮೊಬೈಲ್ ಕಾರ್ಯಾಚರಣೆ ವ್ಯವಸ್ಥೆ ಬಳಕೆ ಇರುವಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ಗೂಗಲ್ ಕಂಪನಿಗೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ₹ 1,337.76 ಕೋಟಿ ದಂಡ ವಿಧಿಸಿದೆ.

ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನಡೆದುಕೊಳ್ಳುವುದರಿಂದ ದೂರವಿರಬೇಕು ಎಂದು ಸಿಸಿಐ ತಾಕೀತು ಮಾಡಿದೆ. ಗೂಗಲ್ ಕಂಪನಿಯು ನಿರ್ದಿಷ್ಟ ಅವಧಿಯೊಳಗೆ ತನ್ನ ವರ್ತನೆಯನ್ನು ತಿದ್ದಿಕೊಳ್ಳಬೇಕು ಎಂದು ಕೂಡ ಸಿಸಿಐ ಸೂಚಿಸಿದೆ.

ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ ಬಳಕೆದಾರರಿಂದ ಬಂದ ದೂರುಗಳನ್ನು ಆಧರಿಸಿ ಸಿಸಿಐ 2019ರ ಏಪ್ರಿಲ್‌ನಲ್ಲಿ ತನಿಖೆಗೆ ಆದೇಶಿಸಿತ್ತು.

ADVERTISEMENT

ಗೂಗಲ್‌ ಮಾಲೀಕತ್ವದ ಮೊಬೈಲ್‌ ಆ್ಯಪ್‌ಗಳು ಹಾಗೂ ಎಪಿಐ (ಆ್ಯಪ್‌ಗಳು ಕಾರ್ಯಾಚರಣೆ ವ್ಯವಸ್ಥೆ ಜೊತೆ ಹಾಗೂ ಇನ್ನೊಂದು ಆ್ಯಪ್‌ ಜೊತೆ ಸಂವಹನ ನಡೆಸಲು ಅಗತ್ಯವಿರುವ ವ್ಯವಸ್ಥೆ) ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಮೊದಲೇ ಕಡ್ಡಾಯವಾಗಿ ಇನ್‌ಸ್ಟಾಲ್ ಆಗಿರುತ್ತವೆ. ಇವುಗಳನ್ನು ಅನ್‌ಇನ್‌ಸ್ಟಾಲ್ಮಾಡಲು ಅವಕಾಶವೇ ಇಲ್ಲ. ಈ ಆ್ಯಪ್‌ಗಳನ್ನು ಪ್ರಧಾನವಾಗಿ ನಿಯೋಜಿಸಲಾಗುತ್ತಿದೆ. ಹೀಗೆ ಮಾಡುವುದು ಸ್ಪರ್ಧಾ ಕಾನೂನಿನ ಉಲ್ಲಂಘನೆ ಎಂದು ಸಿಸಿಐ ಹೇಳಿದೆ.

ಆನ್‌ಲೈನ್‌ ಹುಡುಕಾಟದ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ಶಾಶ್ವತಗೊಳಿಸಿಕೊಂಡಿರುವ ಗೂಗಲ್ ಕಂಪನಿಯು, ಇತರ ಶೋಧ ಆ್ಯಪ್‌ಗಳಿಗೆ ಮಾರುಕಟ್ಟೆ ಲಭ್ಯತೆಯನ್ನು ನಿರಾಕರಿಸುತ್ತಿದೆ ಎಂದು ಸಿಸಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.