ADVERTISEMENT

ಖಾತೆಗೆ ಮರಳದ ಹಣ: ಆರ್‌ಬಿಐಗೆ ಸಿಸಿಪಿಎ ಪತ್ರ

ಪಿಟಿಐ
Published 1 ಜನವರಿ 2021, 17:46 IST
Last Updated 1 ಜನವರಿ 2021, 17:46 IST
ಆರ್‌ಬಿಐ
ಆರ್‌ಬಿಐ   

ನವದೆಹಲಿ: ಬ್ಯಾಂಕ್‌ ವಹಿವಾಟು ವಿಫಲಗೊಂಡಾಗ, ಕಡಿತವಾದ ಹಣ ಖಾತೆಗೆ ಮರಳುವುದು ವಿಳಂಬವಾಗುತ್ತಿದೆ ಎಂದು ಗ್ರಾಹಕರು ದೂರುವುದು ಹೆಚ್ಚುತ್ತಿರುವ ಸಂದರ್ಭದಲ್ಲಿ, ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ), ಹಣ ಸಕಾಲದಲ್ಲಿ ಖಾತೆಗೆ ಮರಳುವಂತೆ ಆಗಬೇಕು ಎಂದು ಆಗ್ರಹಿಸಿ ಆರ್‌ಬಿಐಗೆ ಪತ್ರ ಬರೆದಿದೆ.

ಆರ್‌ಬಿಐನ ಡೆಪ್ಯುಟಿ ಗವರ್ನರ್ ಎಂ.ಕೆ. ಜೈನ್ ಅವರಿಗೆ ಬರೆದಿರುವ ಪತ್ರದಲ್ಲಿ ಸಿಸಿಪಿಎ ಮುಖ್ಯ ಆಯುಕ್ತ ನಿಧಿ ಖರೆ ಅವರು, ‘ವಹಿವಾಟು ವಿಫಲವಾಗಿದ್ದರೂ ಹಣ ಖಾತೆಗೆ ವಾಪಸ್‌ ಆಗಿಲ್ಲ ಎಂಬ 2,850 ದೂರುಗಳು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಮೂಲಕ ಬಂದಿವೆ’ ಎಂದು ಹೇಳಿದ್ದಾರೆ. ಬ್ಯಾಂಕಿಂಗ್‌ ವಲಯದ ಕುರಿತು ದಾಖಲಾಗಿರುವ ದೂರುಗಳ ಪೈಕಿ ಶೇಕಡ 20ರಷ್ಟು ದೂರುಗಳು ಹಣ ಖಾತೆಗೆ ಮರಳದಿರುವುದಕ್ಕೆ ಸಂಬಂಧಿಸಿವೆ.

ವಹಿವಾಟು ವಿಫಲವಾದಾಗ, ಖಾತೆಯಿಂದ ಕಡಿತವಾದ ಹಣವನ್ನು ಬ್ಯಾಂಕ್‌ಗಳು ಮರಳಿಸುತ್ತಿವೆಯಾದರೂ, ಅದು ಆರ್‌ಬಿಐ ಹೇಳಿದ ಕಾಲಮಿತಿಯಲ್ಲಿ ಆಗುತ್ತಿಲ್ಲ ಎಂದು ನಿಧಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ‘ಹಾಗಾಗಿ, ಬ್ಯಾಂಕ್‌ಗಳು ಆರ್‌ಬಿಐ ನಿಗದಿ ಮಾಡಿದ ಕಾಲಮಿತಿಗೆ ಬದ್ಧವಾಗಿರಬೇಕಾದ ಅಗತ್ಯ ಇದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಐಎಂಪಿಎಸ್‌ ಹಾಗೂ ಯುಪಿಐ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆಯೂ ದೂರುಗಳು ಗ್ರಾಹಕರಿಂದ ಬಂದಿವೆ. ಕಡಿತವಾದ ಹಣವು ವಹಿವಾಟು ರದ್ದಾದ ಅಥವಾ ವಿಫಲವಾದ ಬಳಿಕವೂ ಮರಳಿ ಬಂದಿಲ್ಲ ಎಂದು ದೂರುಗಳು ದಾಖಲಾಗಿವೆ. ಬ್ಯಾಂಕ್‌ ಖಾತೆ ಮಾತ್ರವೇ ಅಲ್ಲದೆ, ಮೊಬೈಲ್‌ ಮೂಲಕ ಪಾವತಿ ಸೌಲಭ್ಯ ನೀಡುವ ಆ್ಯಪ್‌ಗಳಲ್ಲಿ ಇರುವ ವಾಲೆಟ್‌ಗಳ ವಿಚಾರದಲ್ಲಿಯೂ ಇದೇ ರೀತಿ ಆಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಸಿಸಿಪಿಎ ಸಂಸ್ಥೆಯನ್ನು 2020ರ ಜುಲೈ 24ರಂದು ಆರಂಭಿಸಲಾಗಿದೆ. ಇದನ್ನು ಗ್ರಾಹಕರ ಹಿತರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಗ್ರಾಹಕರ ಹಕ್ಕುಗಳ ವಿಚಾರದಲ್ಲಿ, ಜಾಹೀರಾತುಗಳು ಗ್ರಾಹಕರನ್ನು ತಪ್ಪುದಾರಿಗೆ ಎಳೆಯದಂತೆ ನಿಯಂತ್ರಣ ರೂಪಿಸುವ ಅಧಿಕಾರ ಇದಕ್ಕೆ ಇದೆ. ಗ್ರಾಹಕರ ಹಕ್ಕುಗಳ ಉಲ್ಲಂಘನೆ ಆದಾಗ ಅದರ ಬಗ್ಗೆ ತನಿಖೆ ನಡೆಸುವ ಅಧಿಕಾರವನ್ನೂ ಸಿಸಿಪಿಎ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.