ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಿಮೆಂಟ್ ದರವು ಶೇ 2ರಿಂದ ಶೇ 4ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಕ್ರಿಸಿಲ್ ಅಂದಾಜಿಸಿದೆ.
ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮೂಲಸೌಕರ್ಯ ವಲಯದ ಅನುದಾನವನ್ನು ಶೇ 10ರಷ್ಟು ಹೆಚ್ಚಿಸಿದೆ. ಅಲ್ಲದೆ, ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದೆ. ಉತ್ತಮ ಮಳೆ ಸುರಿದರೆ ಕೃಷಿ ಚಟುವಟಿಕೆಗಳಿಗೆ ಬಲ ಸಿಗಲಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಸಂಖ್ಯೆ ಹೆಚ್ಚಲಿದ್ದು, ಸಿಮೆಂಟ್‌ಗೆ ಬೇಡಿಕೆಯನ್ನು ಹೆಚ್ಚಿಸಲಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಮೆಂಟ್‌ಗೆ ಶೇ 6.5ರಷ್ಟು ಬೇಡಿಕೆಯಿದ್ದು, ಶೇ 7.5ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ.
2024–25ನೇ ಆರ್ಥಿಕ ವರ್ಷದಲ್ಲಿ ಲೋಕಸಭಾ ಚುನಾವಣೆಯಿಂದಾಗಿ ಸರ್ಕಾರದ ಯೋಜನೆಗಳ ಜಾರಿಯಲ್ಲಿ ವಿಳಂಬವಾಗಿತ್ತು. ಇದರಿಂದ ಸಿಮೆಂಟ್‌ಗೆ ಶೇ 5.5ರಷ್ಟು ಬೇಡಿಕೆ ಕುಸಿದಿತ್ತು. ಅಲ್ಲದೆ, ಅಧಿಕವಾಗಿ ಸುರಿದ ಮಳೆಯು ನಿರ್ಮಾಣ ಚಟುವಟಿಕೆಗಳ ಪರಿಣಾಮ ಬೀರಿತ್ತು ಎಂದು ವಿವರಿಸಿದೆ.
ಮತ್ತೊಂದೆಡೆ ಸಿಮೆಂಟ್ ಕಂಪನಿಗಳ ನಡುವಿನ ಸ್ಪರ್ಧಾತ್ಮಕತೆಯಿಂದ ದರ ಇಳಿಕೆಯಾಗಿತ್ತು ಎಂದು ಹೇಳಿದೆ.
‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರವು ಮೂಲಸೌಕರ್ಯ ಮತ್ತು ವಸತಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನಿಗದಿಪಡಿಸಿದೆ. ಇದರಿಂದ ಸಿಮೆಂಟ್ ದರ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಕ್ರಿಸಿಲ್‌ನ ಇಂಟೆಲಿಜೆನ್ಸ್ ವಿಭಾಗದ ಸಹಾಯಕ ನಿರ್ದೇಶಕ ಸಚ್ಚಿದಾನಂದ್ ಚೌಬೆ ಹೇಳಿದ್ದಾರೆ.
ಮೂಲಸೌಕರ್ಯ ವಲಯವು ದೇಶದ ಮೂರನೇ ಒಂದು ಭಾಗದಷ್ಟು ಸಿಮೆಂಟ್ ಬೇಡಿಕೆಯನ್ನು ಹೊಂದಿದೆ. ಇದರಲ್ಲಿ ರಸ್ತೆಗಳ ನಿರ್ಮಾಣದ ಪಾಲು ಹೆಚ್ಚಿದೆ. ನಂತರ ರೈಲ್ವೆ, ನೀರಾವರಿ ಮತ್ತು ನಗರ ಮೂಲಸೌಕರ್ಯ ವಿಭಾಗವು ಸೇರಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.