ADVERTISEMENT

ಬ್ಯಾಂಕ್‌ ಖಾಸಗೀಕರಣ: ಎರಡು ಕಾಯ್ದೆಗಳಿಗೆ ತಿದ್ದುಪಡಿ

ಪಿಟಿಐ
Published 16 ಫೆಬ್ರುವರಿ 2021, 15:52 IST
Last Updated 16 ಫೆಬ್ರುವರಿ 2021, 15:52 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್    

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಎರಡು ಕಾಯ್ದೆಗಳಿಗೆ ತಿದ್ದುಪಡಿ ತರುವ ಸಾಧ್ಯತೆ ಇದೆ. ತಿದ್ದುಪಡಿ ತರುವ ಪ್ರಕ್ರಿಯೆಯು ವರ್ಷದ ಕೊನೆಯಲ್ಲಿ ಆಗುವ ನಿರೀಕ್ಷೆ ಇದೆ.

ಬ್ಯಾಂಕಿಂಗ್ ಕಂಪನಿಗಳ ಕಾಯ್ದೆ 1970 ಹಾಗೂ ಬ್ಯಾಂಕಿಂಗ್‌ ಕಂಪನಿಗಳ ಕಾಯ್ದೆ 1980ಕ್ಕೆ ತಿದ್ದುಪಡಿ ತರುವ ಅಗತ್ಯ ಇದೆ ಎಂದು ಮೂಲಗಳು ತಿಳಿಸಿವೆ. ಈ ಎರಡು ಕಾಯ್ದೆಗಳ ಮೂಲಕ ಬ್ಯಾಂಕ್‌ಗಳ ರಾಷ್ಟ್ರೀಕರಣವನ್ನು ಎರಡು ಹಂತಗಳಲ್ಲಿ ಜಾರಿಗೆ ತರಲಾಗಿತ್ತು. ಹೀಗಾಗಿ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಈ ಕಾಯ್ದೆಗಳ ಕೆಲವು ಅಂಶಗಳಿಗೆ ತಿದ್ದುಪಡಿ ತರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಿದ್ದುಪಡಿ ಮಸೂದೆಗಳನ್ನು ಕೇಂದ್ರ ಸರ್ಕಾರವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಥವಾ ಅದರ ನಂತರದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.

ADVERTISEMENT

ಫೆಬ್ರುವರಿ 1ರಂದು ಬಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣದ ಘೋಷಣೆ ಮಾಡಿದ್ದಾರೆ. ಸರ್ಕಾರದ ಕೆಲವು ಕಂಪನಿಗಳನ್ನು, ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರುವ ಮೂಲಕ ಒಟ್ಟು ₹ 1.75 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಗುರಿಯ ಭಾಗವಾಗಿ ಬ್ಯಾಂಕ್‌ಗಳ ಖಾಸಗೀಕರಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.